Puttur: ದೀಪಾವಳಿಯ ಪ್ರಯುಕ್ತ ನ.2ರಂದು 12ನೇ ವರ್ಷದ ವಸ್ತ್ರ ವಿತರಣೆ, ಸಹಭೋಜನ ಕಾರ್ಯಕ್ರಮದ ಜತೆಗೆ ಗೂಡು ದೀಪ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳ ಕಾರ್ಯ ಎರಡು ದಿನದಲ್ಲಿ ನಿಶ್ಚಯವಾಗಲಿದ್ದು, ಉಪಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರು ಸೇರಿ ಸರ್ಕಾರದ ವಿವಿಧ ಮಂತ್ರಿಗಳು ಭಾಗವಹಿಸುವುದಾಗಿ ತಿಳಿಸಿದ್ದಾರೆ. ಈ ಭಾಗದ ಪ್ರಮುಖರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಒಂದು ಗಂಟೆಯ ಸಭಾ ಕಾರ್ಯ ಇರಲಿದ್ದು, ಕೆಲವು ವಲಯದಲ್ಲಿ ಗುರುತಿಸಿಕೊಂಡ ಅತ್ಯಂತ ಬಡ ಕುಟುಂಬಗಳನ್ನು ವಿಶೇಷ ರೀತಿಯಲ್ಲಿ ಸನ್ಮಾನಿಸುವ ಕಾರ್ಯ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರೈ ಎಸ್ಟೇಟ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ದೀಪಾವಳಿಯ ಸಂದರ್ಭದಲ್ಲಿ ನಡೆಯುವ ವಸ್ತ್ರ ವಿತರಣೆಯ ಅಶೋಕ್ ಜನ-ಮನ-2024 ಕಾರ್ಯಕ್ರಮದ ಅಂಗವಾಗಿ ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈ ಎಸ್ಟೇಟ್ ಕೋಡಿಂಬಾಡಿಯ ಮನೆಯಲ್ಲಿ ದೀಪಾವಳಿಯ ಸಂದರ್ಭದಲ್ಲಿ 25 ಜನರಿಗೆ ವಸ್ತ್ರ ವಿರಣೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಗಿದ್ದು, ಈ ವರ್ಷ 75ಸಾವಿರ ಮಂದಿಗೆ ವಸ್ತ್ರ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಸಲಾಗುತ್ತಿದೆ. ಟ್ರಸ್ಟ್‌ನಲ್ಲಿ 24 ಸಾವಿರ ಮಂದಿ ನೋಂದಾಯಿತ ಸದಸ್ಯರಿದ್ದು, ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಮಹಿಳೆಯರಿಗೆ ಸೀರೆ, ಗಂಡಸರಿಗೆ ಹಾಗೂ ಮಕ್ಕಳಿಗೆ ಬೆಡ್‌ಶೀಟ್ ನೀಡಲಾಗುತ್ತಿದೆ.
ಪುತ್ತೂರು ಸೇರಿ ವಿವಿಧ ಕಡೆಯಿಂದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪಕ್ಷಾತೀತವಾಗಿ ಎಲ್ಲರೂ ಸೇರಿಕೊಂಡು ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಗಿರಿಜಾ ಸಂಜೀವ ರೈ, ಟ್ರಸ್ಟಿನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸದಸ್ಯರಾದ ಕೃಷ್ಣ ಪ್ರಸಾದ್ ಬೊಳ್ಳಾವು, ಮಹಮ್ಮದ್ ಬಡಗನ್ನೂರು, ಜಯಪ್ರಕಾಶ್ ಬದಿನಾರು, ನಿಹಾಲ್ ಶೆಟ್ಟಿ, ಪ್ರಮುಖರಾದ ಶಿವರಾಮ ಆಳ್ವ, ಮುರಳೀಧರ ರೈ ಮಠಂದಬೆಟ್ಟು, ಕೃಷ್ಣ ಪ್ರಸಾದ್ ಆಳ್ವ, ಈಶ್ವರ ಭಟ್ ಪಂಜಿಗುಡ್ಡೆ, ನಿರಂಜನ ರೈ ಮಠಂದಬೆಟ್ಟು, ಕಾವು ಹೇಮನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
