Puttur: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ಹೊರವಲಯದ ಮುರ ಜಂಕ್ಷನ್ ಸಮೀಪ ಖಾಸಗಿ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಮಗು ಸೇರಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಗಾಯಾಳುಗಳನ್ನು ಅಂಡೆಪುನಿ ನಿವಾಸಿ ಈಶ್ವರ್ ಭಟ್, ಅವರ ಮಗಳು ಅಪೂರ್ವ ಹಾಗೂ ಮೊಮ್ಮಗು ಎಂದು ಗುರುತಿಸಲಾಗಿದೆ.
ವರದಿ ಪ್ರಕಾರ, ಈಶ್ವರ್ ಭಟ್ ಅಂಡೆಪುನಿ ಅವರ ಮನೆಯಲ್ಲಿ ಇಂದು ಶ್ರಾದ್ಧ ಕಾರ್ಯಕ್ರಮವಿತ್ತು. ಇದಕ್ಕಾಗಿ ಅಪೂರ್ವ ಹಾಗೂ ಅವರ ಮಗು ಬೆಂಗಳೂರಿನಿಂದ ಪುತ್ತೂರಿಗೆ ಬಂದಿದ್ದರು. ಈಶ್ವರ್ ಭಟ್ ಅವರು ಪುತ್ತೂರು ಪೇಟೆಯಿಂದ ತಮ್ಮ ವ್ಯಾಗನಾರ್ ಕಾರಿನಲ್ಲಿ ಮನೆಗೆ ಕರೆದುಕೊಂಡು ಬರುತ್ತಿದ್ದಾಗ ಮುರ ಜಂಕ್ಷನ್ ಬಳಿ ಪಡ್ನೂರಿಗೆ ತೆರಳುವ ಒಳರಸ್ತೆಗೆ ಕಾರನ್ನು ತಿರುಗಿಸುತ್ತಿದ್ದಾಗ, ಪುತ್ತೂರಿನಿಂದ ಮಂಗಳೂರಿನ ಕಡೆಗೆ ಬರುತ್ತಿದ್ದ mercy ಎನ್ನುವ ಖಾಸಗಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಾರು ಹಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ ಎನ್ನಲಾಗಿದೆ.
ಅಪಘಾತ ನಡೆದ ಸಂದರ್ಭದಲ್ಲಿ ಆ ಮಾರ್ಗದಲ್ಲಿ ಹಾಲು ವಿತರಿಸಿ ವಾಪಾಸು ಬರುತ್ತಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್ ಹಾಗೂ ಸ್ಥಳೀಯರು ಕೂಡಲೇ ಕಾರಿನಿಂದ ಗಾಯಾಳುಗಳನ್ನು ಹೊರ ತೆಗೆದಿದ್ದಾರೆ. ನಂತರ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಈಶ್ವರ್ ಭಟ್ ಅಂಡೆಪುನಿ ಮತ್ತು ಅವರ ಮಗಳು ಅಪೂರ್ವ ಗೆ ಗಂಭೀರ ಗಾಯವಾಗಿದ್ದು, ಇವರನ್ನು ಮಂಗಳೂರಿನ ಆಸ್ಪತೆಗೆ ರವಾನಿಸಲಾಗಿದೆ. ಮಗುವಿಗೆ ಕೂಡಾ ಗಾಯಗಳಾಗಿದ್ದು, ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
