Mangalore: ಖಚಿತ ಮಾಹಿತಿ ಆಧರಿಸಿ ಮಂಗಳೂರಿನಲ್ಲಿ (Mangalore) ಅರಣ್ಯಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹೆಬ್ಬಾವು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು 18 ವರ್ಷದ ವಿಹಾಲ್ ಶೆಟ್ಟಿ, 35 ವರ್ಷದ ಇಬ್ರಾಹಿಂ ಶಕೀಲ್ ಇಸ್ಮಾಯಿಲ್, 22 ವರ್ಷದ ಮಹಮ್ಮದ್ ಮುಸ್ತಫಾ ಮತ್ತು 16 ವರ್ಷದ ಪಿಯುಸಿ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿ ಸಾಕುಪ್ರಾಣಿ ಮಾರಾಟ ಮಳಿಗೆ ಹೊಂದಿರುವ ಇಬ್ರಾಹಿಂ ಶಕೀಲ್ ಇಸ್ಮಾಯಿಲ್, ಅಕ್ರಮವಾಗಿ ಹಾವುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ನಂತರ, ವಿಹಾಲ್ ಶೆಟ್ಟಿಯನ್ನು ಗ್ರಾಹಕರ ಸೋಗಿನಲ್ಲಿ ಸಂಪರ್ಕಿಸಿದರು. ಯಾವುದೇ ಅನುಮಾನವಿಲ್ಲದೆ, ವಿಹಾಲ್ ಶೆಟ್ಟಿ ಅಧಿಕಾರಿಗಳನ್ನು ನಿಜವಾದ ಗ್ರಾಹಕರು ಎಂದು ನಂಬಿ ಹೆಬ್ಬಾವನ್ನು ಮಾರಾಟ ಮಾಡಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಆತನನ್ನು ವಶಕ್ಕೆ ಪಡೆದರು. ಆತನ ವಿಚಾರಣೆಯ ಆಧಾರದ ಮೇಲೆ ಇತರ ಮೂವರು ಆರೋಪಿಗಳನ್ನು ಸಹ ಬಂಧಿಸಲಾಯಿತು.
ಬಂಧಿತ ಆರೋಪಿಗಳು, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನುಸೂಚಿತ (Schedule 1) ಭಾಗ ‘ಸಿ’ ಅಡಿಯಲ್ಲಿ ಸಂರಕ್ಷಿತ ಪ್ರಾಣಿಯಾದ ಇಂಡಿಯನ್ ರಾಕ್ ಪೈಥಾನ್ (ಹೆಬ್ಬಾವು) ಅನ್ನು, ಇದು ಬರ್ಮಿಸ್ ಬಾಲ್ ಪೈಥಾನ್ ಎಂದು ಸುಳ್ಳು ಹೇಳಿ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಅರಣ್ಯ ಇಲಾಖೆ ತಿಳಿಸಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Mangalore: ಮಂಗಳೂರಿನ ನೂತನ ಡಿಸಿಪಿಯಾಗಿ ಆಯ್ಕೆಯಾದ ಮಿಥುನ್ ಎಚ್.ಎನ್!
