ಬೆಳಗಾವಿ: ಈ ಸಾರಿ ನಾಟಿ ಕೋಳಿ ನೇರ ಸದನಕ್ಕೆ ಎಂಟ್ರಿಯಾಗಿದೆ. ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ನಡುವೆ ನಾಟಿ ಕೋಳಿಯ ಬಗ್ಗೆ ಚರ್ಚೆ ಸ್ವಾರಸ್ಯಕರವಾಗಿತ್ತು.
ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲ ಕಲಾಪ ಶುರುವಾಗುವ ಮುನ್ನ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಕಚೇರಿಗೆ ಆಗಮಿಸಿ ಕಾರ್ಯ ಕಲಾಪಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು. ಅಲ್ಲಿಂದ ನಿರ್ಗಮಿಸುವಾಗ ಅಲ್ಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದರು. ಇಬ್ಬರೂ ಎದುರು ಬದುರಾದರು .
ಈ ವೇಳೆ ಮುಖ್ಯಮಂತ್ರಿ ಅವರು ಆರ್.ಅಶೋಕ್ ಅವರನ್ನು ಕಂಡು ಆತ್ಮಿಯವಾಗಿ, “ಏನಯ್ಯ ಸಣ್ಣಗಾಗಿದ್ದಿಯಾ?” ಎಂದು ಕೇಳಿದರು. ಇದಕ್ಕೆ ಲಘುವಾಗಿಯೇ ಉತ್ತರಿಸಿದ ಆರ್.ಅಶೋಕ್, ” ನಾನೀಗ ನಾಟಿ ಕೋಳಿ ತಿನ್ನುವುದನ್ನು ಬಿಟ್ಟಿದ್ದೀನಿ ಸರ್” ಎಂದು ಟಾಂಗ್ ನೀಡಿದ್ದಾರೆ. ಹಾಗೆಲ್ಲಾ ಬಿಡಬಾರದು ಸಮಯ ಸಿಕ್ಕಾಗ ನಾಟಿ ಕೋಳಿ ತಿನ್ನಬೇಕು ಎಂದು ಸಿದ್ದರಾಮಯ್ಯ ಸಾಮಾನ್ಯ ಸ್ಥಿತಿಯಲ್ಲೇ ಹೇಳಿದ್ದಾರೆ. ಇದಕ್ಕೆ ಅಕ್ಕಪಕ್ಕ ಇದ್ದ ಬಿಜೆಪಿಯ ವಿ.ಸುನಿಲ್ ಕುಮಾರ್, ಕಾಂಗ್ರೆಸ್ಸಿನ ಪಿ.ಎಂ.ಅಶೋಕ್ ನಕ್ಕು ಪ್ರತಿಕ್ರಿಯಿಸಿದ್ದಾರೆ.
