Rafale Fighter Jet: ಮುಂದಿನ ದಿನಗಳಲ್ಲಿ ವಿಶ್ವದ ಶಕ್ತಿಶಾಲಿ ಯುದ್ಧವಿಮಾನಗಳಲ್ಲಿ ಒಂದೆನಿಸಿದ ರಫೇಲ್ ಫೈಟರ್ ಜೆಟ್ನ ಮುಖ್ಯ ಭಾಗವೊಂದು ಭಾರತದಲ್ಲೇ ತಯಾರಾಗಲಿದೆ. ಫ್ರಾನ್ಸ್ ದೇಶದ ಡಸ್ಸೋ ಏವಿಯೇಶನ್ ಜೊತೆ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಒಪ್ಪಂದ ಮಾಡಿಕೊಂಡಿದ್ದು, ಏರ್ಕ್ರಾಫ್ಟ್ನ ಮುಖ್ಯ ಭಾಗವಾದ ಫ್ಯೂಸಲಾಜ್ ತಯಾರಾಗಲಿದೆ.
ಇದುವರೆಗೂ ಫ್ರಾನ್ಸ್ ನ ಹೊರತು ಬೇರೆಲ್ಲೂ ಇವು ತಯಾರಾಗಿಲ್ಲ ಆದ್ದರಿಂದ ಭಾರತ ಈ ವಿಚಾರದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ.
ಈ ಫ್ಯೂಸಲಾಜ್ ಗಳು ವಿಮಾನದ ಹೊರಕವಚವಾಗಿದ್ದು, ವಿಮಾನದ ಎಲ್ಲಾ ಭಾಗಗಳಿಗೂ ಇದು ಕೊಂಡಿ ಇದ್ದಂತೆ ಇರುತ್ತದೆ ಹಾಗೂ ಇದನ್ನು ವಿಮಾನ ಯಾವ ಉದ್ದೇಶಕ್ಕೆ ಬಳಕೆಯಾಗುತ್ತದೆ ಎಂಬುದರ ಆಧಾರದ ಮೇರೆಗೆ ಫ್ಯೂಸಲಾಜ್ನ ರೂಪುರೇಖೆಯನ್ನು ಮಾಡಲಾಗುತ್ತದೆ.
ಇದರ ತಯಾರಿಕಾ ಘಟಕವನ್ನು ಹೈದರಾಬಾದ್ ನಲ್ಲಿ ಸ್ಥಾಪಿಸಿದ್ದು, ಇದರ ವಿವಿಧ ಭಾಗಗಳ ಇಲ್ಲೇ ತಯಾರಾಗುತ್ತವೆ. ವರದಿಗಳ ಪ್ರಕಾರ, 2027-28ರಲ್ಲಿ ಇಲ್ಲಿಂದ ಮೊದಲ ಫ್ಯೂಸಲಾಜ್ ಭಾಗ ಹೊರಬರುವ ನಿರೀಕ್ಷೆ ಇದೆ. ತಿಂಗಳಿಗೆ ಎರಡು ಫ್ಯೂಸಲಾಜ್ಗಳನ್ನು ಈ ಘಟಕದಲ್ಲಿ ತಯಾರಿಸಲು ಸಾಧ್ಯ ಎಂದು ಹೇಳಲಾಗುತ್ತಿದೆ.
