ರಾಜ್ಯ ಹಾಗೂ ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಏಳಿಗೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಜನರಿಗೆ ಬೆಂಬಲವಾಗಿ ನಿಂತಿವೆ. ಇವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಸರ್ಕಾರ ಹಾಗೂ ರಾಜ್ಯ ಸರ್ಕಾರವು ಬಡ ಕುಟುಂಬಕ್ಕೆ ಸಲುವಾಗಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾನ್ ಅನ್ನ ಯೋಜನೆ ಜಾರಿಗೆ ತಂದು ಬಡ ಕುಟುಂಬಕ್ಕೆ ಗೋಧಿ, ಅಕ್ಕಿ, ಎಣ್ಣೆ, ಬೇಳೆ, ಹಿಟ್ಟು ಮೊದಲಾದವುಗಳನ್ನು ಕಡಿಮೆ ದರದಲ್ಲಿ ಲಭ್ಯವಾಗುವಂತೆ ಮಾಡಿದೆ.
ಇದೀಗ, ರಾಜ್ಯದಲ್ಲಿ ಆರು ವರ್ಷಗಳಿಂದ ಆದ್ಯತಾ (ಬಿಪಿಎಲ್) ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲ್ಪಟ್ಟು ವಿಲೇವಾರಿಯಾಗಲು ಬಾಕಿ ಉಳಿದಿರುವ 1,53,319 ಅರ್ಜಿದಾರರು ಬಿಪಿಎಲ್ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ಥಳ ಪರಿಶೀಲಿಸಿ ವರದಿ ನೀಡಲು ಸರಕಾರವು ತಾಲೂಕು ಆಹಾರ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದೆ.
ಸರಕಾರ ನಿಗದಿಪಡಿಸಿರುವ ನಾಲ್ಕು ಮಾನದಂಡಗಳನ್ನು ಅನುಸರಿಸಿ, ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿ ಸಿರುವವರ ಸ್ಥಳ ಪರಿಶೀಲನೆ ಮಾಡಿ ಅರ್ಜಿಗಳು ಬಿಪಿಎಲ್ ವ್ಯಾಪ್ತಿಗೆ ಸೇರ್ಪಡೆಯಾಗದೆ ಇದ್ದಲ್ಲಿ ಎಪಿಎಲ್ ಕಾರ್ಡಿಗೆ ಶಿಫಾರಸ್ಸು ಮಾಡಲು ಸೂಚಿಸಲಾಗಿದೆ. ಸ್ಥಳ ಪರಿಶೀಲನೆಯ ವೇಳೆ, ಅರ್ಜಿದಾರರು ಜಂಟಿ ಕುಟುಂಬದವರೆ ಎಂಬುದನ್ನು ಪರಿಶೀಲನೆ ನಡೆಸಬೇಕಾಗಿದೆ. ಜಂಟಿ ಕುಟುಂಬದಿಂದ ಪ್ರತ್ಯೇಕವಾಗುವ ಕುರಿತ ಅರ್ಜಿ ಸಲ್ಲಿಕೆಯಾಗಿದೆಯೇ ಎಂಬುದನ್ನು ತಿಳಿಯಬೇಕು. ಇದಲ್ಲದೇ, ಈಗಾಗಲೇ ಬೇರೆ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಯಾಗಿದೆಯೆ ಎಂದು ಪರಿಶೀಲಿಸಬೇಕಾಗಿದ್ದು, ಎಪಿಎಲ್ ಕಾರ್ಡ್ ಇದ್ದರೂ ಸಹಿತ ಮತ್ತೊಂದು ಅರ್ಜಿ ಸಲ್ಲಿಸಿದ್ದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಬೇಕು ಎಂದು ಸೂಚನೆ ಹೊರಡಿಸಲಾಗಿದೆ.
ಈಗಾಗಲೇ ತಿರಸ್ಕೃತಗೊಂಡ ಅರ್ಜಿಯನ್ನು ಮತ್ತೊಮ್ಮೆ ಅನರ್ಹರು ಅರ್ಜಿ ಸಲ್ಲಿಸಲು ಪ್ರಯತ್ನಿಸಿದರೆ ಬಿಪಿಎಲ್ ಕಾರ್ಡ್ ನೀಡದಂತೆ ನಿರ್ದೇಶನ ಹೊರಡಿಸಲಾಗಿದೆ. ಇದಲ್ಲದೇ, ಸರಕಾರಿ ನೌಕರಿಯಲ್ಲಿದ್ದು, ನಿವೃತ್ತ ನೌಕರರಾಗಿದ್ದು ಇಲ್ಲವೇ ಕಂಪೆನಿ ಉದ್ಯೋಗಿಗಳು, ವ್ಯಾಪಾರಸ್ಥರು, ದೊಡ್ಡ ಭೂ ಹಿಡುವಳಿದಾರರು ಸರಕಾರದ ಇತರ ಪ್ರಯೋಜನಗಳಿಗೆ ಅರ್ಜಿ ಸಲ್ಲಿಸಿದ್ದರೆ ತಿರಸ್ಕರಿಸುವಂತೆ ಸೂಚನೆ ನೀಡಲಾಗಿದೆ. ಪ್ರತೀ ಆಹಾರ ನಿರೀಕ್ಷಕರು/ಶಿರಸ್ತೇದಾರರು ಆದ್ಯತಾ ಪಡಿತರ ಚೀಟಿ ಅರ್ಜಿಗಳನ್ನು ಪರಿಶೀಲಿಸಿ ಅರ್ಜಿದಾರರು ಅರ್ಹರಾಗಿದ್ದಾರೆಯೆ ಇಲ್ಲವೇ ಎಂಬ ಅಂಕಿಅಂಶ ತಯಾರಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಅರ್ಹತೆ ಹಾಗೂ ಅನರ್ಹತೆ ಬಗ್ಗೆ ವರದಿ ಮಾತ್ರ ಸಲ್ಲಿಸಲು ಈಗಾಗಲೇ ಅವಕಾಶ ಕಲ್ಪಿಸಲಾಗಿದ್ದು, ಹೀಗಾಗಿ, ಯಾವುದೇ ಹೊಸ ಪಡಿತರ ಚೀಟಿಯನ್ನು ಆನ್‌ಲೈನ್‌ನಲ್ಲಿ ಮಂಜೂರು ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.
2017ರಿಂದ ಪಡಿತರ ಚೀಟಿಗೆ ಸಲ್ಲಿಕೆಯಾದ ಅರ್ಜಿಗಳಲ್ಲಿ 1,55,927 ಆದ್ಯತಾ ಪಡಿತರ ಚೀಟಿ ಅರ್ಜಿಗಳನ್ನು ಪರಿಶೀಲಿಸಿ ದ ಬಳಿಕ ಅನುಮೋದನೆ ಮಾಡುವಂತೆ ಈಗಾಗಲೇ ಸರಕಾರ ಆದೇಶ ಹೊರಡಿಸಿದೆ. ಈ ಪೈಕಿ 68 ಸಾವಿರ ಬಿಪಿಎಲ್ ಅರ್ಜಿಗಳಿಗೆ ಅನುಮೋದನೆ ನೀಡಲಾಗಿದ್ದು, ಉಳಿದ 1,53,319 ಅರ್ಜಿಗಳನ್ನು ಸ್ಥಳ ಪರಿಶೀಲನೆ ನಡೆಸಿ ತೀರ್ಮಾನಿಸುವಂತೆ ಸೂಚಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಿ 2017ರಿಂದ 2023ರ ಜನವರಿ ತನಕ 40,58,238 ಅರ್ಜಿ ಸ್ವೀಕಾರ ಮಾಡಲಾಗಿದೆ. ಇವುಗಳಲ್ಲಿ 27,47,118 ಅರ್ಜಿಗಳನ್ನು ಅನುಮೋದಿಸಲಾಗಿದ್ದು, 10,02,174 ಅರ್ಜಿ ತಿರಸ್ಕೃತಗೊಂಡಿದೆ. 37,49,292 ಅರ್ಜಿ ವಿಲೇವಾರಿಯಾಗಿದ್ದು, 3,09,246 ಬಾಕಿ ಉಳಿದಿವೆ ಎನ್ನಲಾಗಿದೆ.
