Home » RCB: ಚಿನ್ನಸ್ವಾಮಿಯಲ್ಲೇ ಮ್ಯಾಚ್ ಆಡ್ತೇವೆ, ಆದ್ರೆ ಒಂದು ಕಂಡೀಷನ್ ಎಂದ RCB!!

RCB: ಚಿನ್ನಸ್ವಾಮಿಯಲ್ಲೇ ಮ್ಯಾಚ್ ಆಡ್ತೇವೆ, ಆದ್ರೆ ಒಂದು ಕಂಡೀಷನ್ ಎಂದ RCB!!

0 comments

RCB: 2026 ರ ಐಪಿಎಲ್ ಮಾರ್ಚ್​ ತಿಂಗಳ ಕೊನೆಯ ವಾರದಿಂದ ಆರಂಭವಾಗುವ ಸಾಧ್ಯತೆಗಳಿವೆ.  ಎಲ್ಲಾ 10 ಫ್ರಾಂಚೈಸಿಗಳು ಕೂಡ ಈಗಾಗಲೇ ತಯಾರಿಯಲ್ಲಿ ತೊಡಗಿವೆ. ಆದಾಗ್ಯೂ ಹಾಲಿ ಚಾಂಪಿಯನ್ ಆರ್​ಸಿಬಿ ಮಾತ್ರ ಯಾವ ಕ್ರೀಡಾಂಗಣದಲ್ಲಿ ತನ್ನ ತವರು ಪಂದ್ಯಗಳನ್ನು ಆಡಲಿದೆ ಎಂಬುದು ಇನ್ನು ಖಚಿತವಾಗಿರಲಿಲ್ಲ. ಇದರಿಂದ ಅಸಂಖ್ಯಾತ ಆರ್​ಸಿಬಿ ಅಭಿಮಾನಿಗಳಿಗೆ ಸಖತ್​ ಬೇಜಾರಾಗಿತ್ತು. ನೆಚ್ಚಿನ ತಂಡದ ಆಟವನ್ನು ನೇರವಾಗಿ ಕಣ್ತುಂಬಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ಅಭಿಮಾನಿಗಳು ಮುಳುಗಿದ್ದರು. ಆದರೆ, ಆ ಚಿಂತೆ ಇನ್ನು ಬೇಡ. ಅಧಿಕೃತವಾಗಿ ಆರ್​ಸಿಬಿಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವುದಾಗಿ ಹೇಳಿದೆ. ಆದರೆ, ಒಂದಿಷ್ಟು ಷರತ್ತುಗಳನ್ನು ಸಹ ವಿಧಿಸಿದೆ.

ಹೌದು, ನಾವು ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತೇವೆ ಎಂದು ಆರ್​ಸಿಬಿ ಅಧಿಕೃತವಾಗಿ ಹೇಳಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​(ಕೆಎಸ್‌ಸಿಎ) ಗೆ ಪತ್ರ ಬರೆದಿರುವ ಆರ್​ಸಿಬಿ ಫ್ರಾಂಚೈಸಿ, ಒಂದು ಪ್ರಸ್ತಾಪವನ್ನು ಮುಂದಿಟ್ಟಿದೆ. ಅದೇನೆಂದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಚಲನಾವಲನವನ್ನು ಮೇಲ್ವಿಚಾರಣೆ ಮಾಡಲು, ಸರತಿ ಸಾಲು ವ್ಯವಸ್ಥೆಗಳನ್ನು ನಿಯಂತ್ರಿಸಲು ಮತ್ತು ಪ್ರವೇಶ ಮತ್ತು ನಿರ್ಗಮನ ದ್ವಾರದ ರಿಯಲ್​ ಟೈಮ್​ ಟ್ರ್ಯಾಕಿಂಗ್ ಮೂಲಕ ಅನಧಿಕೃತ ಪ್ರವೇಶವನ್ನು ತಡೆಯಲು ಸುಧಾರಿತ ಕಣ್ಗಾವಲು ತಂತ್ರಜ್ಞಾನವನ್ನು ನಿಯೋಜಿಸುವ ಯೋಜನೆಯನ್ನು ಕೆಎಸ್​ಸಿಎಗೆ ಆರ್​ಸಿಬಿ ವಿವರಿಸಿದೆ.

ಈ ಒಂದು ಕ್ರಮವು ಪಂದ್ಯ ನಡೆಯುವ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಆರ್‌ಸಿಬಿ ಹೇಳಿದೆ. ವಿಶೇಷವಾಗಿ ಐಪಿಎಲ್ ಪಂದ್ಯಗಳು ಮತ್ತು ಇತರ ಪ್ರಮುಖ ಕಾರ್ಯಕ್ರಮಗಳ ಸಮಯದಲ್ಲಿ ಹೆಚ್ಚಿನ ಜನ ದಟ್ಟನೆ ಸೇರಿದಾಗ ಯಾವುದೇ ಅನಾಹುತ ಸಂಭವಿಸಬಾರದು ಅನ್ನೋದು ಆರ್​ಸಿಬಿಯ ಆಶಯವಾಗಿದೆ.

ಆರ್​ಸಿಬಿ ಫ್ರಾಂಚೈಸಿ ಈ ಪ್ರಸ್ತಾವನೆಯನ್ನು ಕೆಎಸ್​ಸಿಎ ಮುಂದಿಟ್ಟಿರುವುದು ಮಾತ್ರವಲ್ಲದೆ, ಎಐ ಕ್ಯಾಮೆರಾಗಳನ್ನು ಅಳವಡಿಸಲು ತಗಲುವ ವೆಚ್ಚವನ್ನು ತಾನೇ ಬರಿಸುವುದಾಗಿ ತಿಳಿಸಿದೆ. ಕ್ಯಾಮೆರಾಗಳನ್ನು ಅಳವಡಿಸಲು ಬೇಕಾಗುವ ಸರಿಸುಮಾರು 4.5 ಕೋಟಿ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವುದಾಗಿ ಆರ್​ಸಿಬಿ ತಿಳಿಸಿದೆ.

You may also like