Home Minister: ರಾಜ್ಯದ ಸಿಎಂ, ಗೃಹ ಸಚಿವರು ಹಾಗೂ ಇನ್ನಿತರ ರಾಜಕೀಯ ನಾಯಕರ ವಿರುದ್ಧ ಕೆಲ ವ್ಯಕ್ತಿಗಳು ಅವಾಚ್ಯ ಶಬ್ದ ಬಳಕೆ ಮಾಡಿ ನಿಂದಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಬಂಧನಕ್ಕೆ ಸೂಚನೆ ನೀಡಿದೆ ಅನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶವರ್, ಆ ರೀತಿ ನಾವೇನು ಯಾವುದೇ ಸೂಚನೆ ಕೊಟ್ಟಿಲ್ಲ. ಸ್ಥಳೀಯ ಪೊಲೀಸರಿಗೆ ಬಿಟ್ಟಿದ್ದೇವೆ ಎಂದರು.
ಎಲ್ಲೆಲ್ಲಿ ಇಂತಹ ಘಟನೆಗಳು ನಡೆಯುತ್ತವೆಯೋ, ಸಾಮಾನ್ಯವಾಗಿ ಏನೋ ಹೇಳಿದ ಕೂಡಲೇ ಅರೆಸ್ಟ್ ಮಾಡಲು ಹೋಗೋದಿಲ್ಲ. ಅದರ ತೀವ್ರತೆಯನ್ನು ಯೋಚನೆ ಮಾಡಬೇಕಾಗುತ್ತೆ. ಸ್ಥಳೀಯ ಪೊಲೀಸರಿಗೆ ಬಿಟ್ಟಿರುತ್ತೇವೆ. ನಾವೇನು ನಿರ್ದೇಶನ ಕೊಟ್ಟಿಲ್ಲ . ಹೇಟ್ ಸ್ಪೀಚ್ ಬಿಲ್ ತರುತ್ತಿದ್ದೇವೆ. ಅದರಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾಪ ಮಾಡಿರುತ್ತೇವೆ. ಫೇಕ್ ನ್ಯೂಸ್ ವಿಚಾರದಲ್ಲೂ ಅನೇಕ ವಿಚಾರ ಪ್ರಸ್ತಾಪ ಮಾಡಲಾಗಿರುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನು ನಿನ್ನೆ ಸದನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ, ಹರೀಶ್ ಪೂಂಜ 2023 ರಲ್ಲಿ ಮಾತನಾಡಿದ ವಿಡಿಯೋ ಕುರಿತು ಪ್ರತಿಕ್ರಿಯೆ ನೀಡದ ಗೃಹಸಚಿವರು,2023ರಲ್ಲಿ ಮಾತನಾಡಿದ್ದು, ಅದು ಕೇಸ್ ಕೂಡ ರಿಜಿಸ್ಟರ್ ಆಗಿತ್ತು. ಸ್ಟೇ ಕೂಡ ಆಗಿದೆ. ಸ್ಟೇ ವೆಕೇಟ್ ಆದರೆ ಮಾತ್ರ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದರು.
ಧರ್ಮಸ್ಥಳದ ಮಧ್ಯಂತರ ವರದಿ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಉತ್ತರಿದ ಅವರು ಈಗಲೇ ಬರುತ್ತೆ ಆಗಲೇ ಬರುತ್ತೆ ಅಂತ ಹೇಳಲು ಆಗೋದಿಲ್ಲ ಆದಷ್ಟು ಬೇಗ ಬರುತ್ತೆ. ಅಸೆಂಬ್ಲಿಯಲ್ಲಿ ನಿನ್ನೆ ಉತ್ತರ ಕೊಟ್ಟಿದ್ದೇನೆ ಧರ್ಮಸ್ಥಳದ ವಿಚಾರವಾಗಿ. ಅವರು ಬೇರೆ ವಿಚಾರಗಳನ್ನು ಪ್ರಸ್ತಾಪ ಮಾಡಿದ್ರೂ ಅದಕ್ಕೂ ಸಮರ್ಪಕವಾಗಿ ಉತ್ತರವನ್ನ ನೀಡುತ್ತೇವೆ ಎಂದು ಖಡಕ್ಕಾಗಿ ಬಿಜೆಪಿಗೆ ವಾರ್ನಿಂಗ್ ಕೊಟ್ಟರು.
