

ಬೆಳ್ತಂಗಡಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯನ್ನು ಜ.26ರಂದು ತಾಲೂಕು ಆಡಳಿತ ಸೌಧ ಆವರಣದಲ್ಲಿ ಆಚರಿಸಲಾಯಿತು.
ಪ್ರಧಾನ ಭಾಷಣಕಾರರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಮಾತನಾಡಿ, ಗಣರಾಜ್ಯ ಉಗಮವಾದ ಬಗೆಯನ್ನು ನೆನಪಿಸಿಕೊಳ್ಳಬೇಕು. ಸ್ವಾತಂತ್ರ್ಯ ಮತ್ತು ಗಣರಾಜ್ಯ ದಿನಾಚರಣೆಗೆ ಇರುವ ವ್ಯತ್ಯಾಸವನ್ನು ಅರಿತುಕೊಳ್ಳಬೇಕು ಎಂದು ಹೇಳಿ ಗಣರಾಜ್ಯೋತ್ಸವದ ಶುಭ ಹಾರೈಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಶಾಸಕ ಹರೀಶ್ ಪೂಂಜಾ ಮಾತನಾಡಿ, ಸಂವಿಧಾನದ ರಕ್ಷಣೆ ಮಾಡಬೇಕಾದ ಜವಾಬ್ದಾರಿ ಈ ದೇಶದ ಪ್ರಜೆಗಳದ್ದು ಹಾಗೂ ಸರ್ಕಾರದ್ದು. ನಾವೆಲ್ಲ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಬದುಕಬೇಕು. ಪೂರ್ಣವಾಗಿ ಸಾಮರಸ್ಯ, ಸಮಾನತೆಯ, ಭ್ರಾತೃತ್ವತೆಯನ್ನು ಕಾಪಾಡಿಕೊಂಡು ಮುನ್ನಡೆಯಬೇಕು. ವಂದೇ ಮಾತರಂ ರಾಷ್ಟ್ರಗೀತೆಗೆ 150ನೇ ವರ್ಷದ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಎಂದರು.
ಧ್ವಜಾರೋಹಣವನ್ನು ನೆರವೇರಿಸಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿ, ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇರಲು ಸಂವಿಧಾನದ ಪಾಲು ಬಹಳಷ್ಟಿದೆ. ಸಂವಿಧಾನದ ಬಹುಮುಖ್ಯ ಅಂಶಗಳಾದ ಭ್ರಾತೃತ್ವತೆಯನ್ನು ಅಳವಡಿಸಿಕೊಳ್ಳಬೇಕು, ತಾರ್ಕಿಕ ಯೋಚನೆಗಳನ್ನು ಅಳವಡಿಸಿಕೊಂಡು ಪ್ರಶ್ನಿಸುವ ರೂಢಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ರಾಜ್ಯ ಸಭಾ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರ ಸಂದೇಶವನ್ನು ವಾಚಿಸಲಾಯಿತು. ಲೋಕೋಪಯೋಗಿ ಇಲಾಖೆಯ ಸಹಾಯಕಕಾರ್ಯಪಾಲಕ ಅಭಿಯಂತರ ಬಕ್ಕಪ್ಪ, ಮುಖ್ಯಾಧಿಕಾರಿ ರಾಜೇಶ್ ಕೆ, ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್, ಎನ್.ಸಿ.ಸಿ. ಕ್ಯಾಡೆಟ್, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಸ್ವಾಗತಿಸಿದರು. ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಶಿಕ್ಷಕಿ ಶೋಭಾ ಹಾಗೂ ಸಹಶಿಕ್ಷಕಿ ರೂಪಲತಾ ನಿರೂಪಿಸಿದರು













