Saif Ali Khan Attacked: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಹಲ್ಲೆ ನಡೆದಿದೆ. ಮುಂಜಾನೆ 2 ಗಂಟೆ ವೇಳೆಗೆ ಇವರ ಮನೆಗೆ ಕಳ್ಳರು ನುಗ್ಗಿದ್ದು, ಜಗಳದ ವೇಳೆ ಸೈಫ್ ಅಲಿ ಖಾನ್ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಬಾಂದ್ರಾ ಪೊಲೀಸರು ದರೋಡೆಕೋರ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಮುಂಜಾನೆ 2 ಗಂಟೆಗೆ ಸೈಫ್ ಅಲಿಖಾನ್ ಮನೆಗೆ ಪ್ರವೇಶಿಸಿದ ದರೋಡೆಕೋರ, ಈ ಸಂದರ್ಭದಲ್ಲಿ ಸೈಫ್ ಮತ್ತು ಅಪರಿಚಿತ ವ್ಯಕ್ತಿಯ ನಡುವೆ ಮಾರಾಮಾರಿ ನಡೆದಿದೆ. ಸೈಫ್ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಲಾಗಿದೆ. ದಾಳಿ ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸೈಫ್ ಅವರ ಕುತ್ತಿಗೆಯಲ್ಲಿ 10 ಸೆಂ.ಮೀ ಗಾಯವಾಗಿದೆ. ಸೈಫ್ ಕೈ ಮತ್ತು ಬೆನ್ನಿಗೂ ಗಾಯವಾಗಿದೆ.
ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಆಲಿ ಖಾನ್ ಮನೆಯಲ್ಲಿ ಮನೆಮಂದಿ ಜೊತೆ ಮಲಗಿದ್ದ ಸಂದರ್ಭದಲ್ಲಿ ಇಂದು (ಜ.16) ರ ಮುಂಜಾನೆ 2.30ರ ವೇಳೆಗೆ ಕಳ್ಳರು ಮನೆಗೆ ನುಗ್ಗಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಎಚ್ಚರಗೊಂಡಿದ್ದು, ಆಗ ಸೈಫ್ ಕಳ್ಳರನ್ನು ತಡೆಯಲು ಹೋಗಿದ್ದ ಸಂದರ್ಭದಲ್ಲಿ ಕಳ್ಳರು ಚಾಕುವಿನಿಂದ ನಟನಿಗೆ ಹಲ್ಲೆ ಮಾಡಿದ್ದಾರೆ.
ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದ್ದು, ವಿಶೇಷ ಪೊಲೀಸರ ತಂಡ ರಚನೆ ಆಗಿದೆ. ಮನೆಯ ಸುತ್ತಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದೆ.
ʼಕಳ್ಳರು 2-3 ಬಾರಿ ಹಲ್ಲೆ ಮಾಡಿದ್ದು, ತನಿಖೆ ನಡೆಯುತ್ತಿದೆ. ಮುಂಬೈ ಕ್ರೈಮ್ ಬ್ರ್ಯಾಂಚ್ ಈ ಕುರಿತು ತನಿಖೆ ಮಾಡುತ್ತಿದೆ. ಆರು ಗಾಯವಾಗಿದ್ದು, ಎರಡು ಕಡೆ ತುಂಬಾ ಗಂಭೀರ ಗಾಯವಾಗಿದೆ ನಟನಿಗೆ ಎಂದು ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ.
ಸೈಫ್ ಆಲಿಖಾನ್‌ನ ಬೆನ್ನಿನ ಭಾಗದಲ್ಲಿ ಕಳ್ಳರು ಇರಿದಿದ್ದು, ದೊಡ್ಡ ಗಾಯವೇ ಆಗಿದೆ ಎನ್ನಲಾಗಿದೆ. ಬೆನ್ನು ಮೂಳೆಗೆ ತೊಂದರೆ ಉಂಟಾಗಿದೆಯೇ ಎಂದು ವೈದ್ಯರು ಪರಿಶೀಲನೆ ಮಾಡುತ್ತಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎನ್ನಲಾಗಿದೆ.
