Visa: ಅಮೆರಿಕ ಅಕ್ರಮ ವಲಸಿಗ ಭಾರತೀಯರನ್ನು ಗಡಿಪಾರು ಮಾಡಿರುವ ಬೆನ್ನಲ್ಲೇ ಸೌದಿ ಅರೇಬಿಯಾ ಇನ್ನೊಂದು ಶಾಕ್ ಕೊಟ್ಟಿದೆ. ಹೌದು, ಸೌದಿ ಅರೇಬಿಯಾ ತನ್ನ ವೀಸಾ (Visa) ನಿಯಮಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ಘೋಷಿಸಿದೆ.
ಭಾರತ ಮತ್ತು ಪಾಕಿಸ್ತಾನ ಸೇರಿದಂತೆ 14 ದೇಶಗಳ ಪ್ರಯಾಣಿಕರಿಗೆ ಬಹು-ಪ್ರವೇಶ ವೀಸಾವನ್ನು ನಿಷೇಧಿಸಿದೆ, ಈಗ ಅವರಿಗೆ ಒಂದೇ ಪ್ರವೇಶ ವೀಸಾದಲ್ಲಿ ಮಾತ್ರ ದೇಶಕ್ಕೆ ಪ್ರವೇಶ ನೀಡಲಾಗುವುದು. ಈ 14 ರಾಷ್ಟ್ರಗಳ ಪ್ರಯಾಣಿಕರು ದೀರ್ಘಾವಧಿಯ ಭೇಟಿ ವೀಸಾಗಳಲ್ಲಿ ಮರುಭೂಮಿ ರಾಜ್ಯಕ್ಕೆ ಬರುವ ಮೂಲಕ ಅನಧಿಕೃತವಾಗಿ ಹಜ್ ಯಾತ್ರೆ ಮಾಡುವುದನ್ನು ತಡೆಯಲು ಜಾರಿಗೆ ತರಲಾಗಿದೆ. ಇದರಿಂದ ಹಜ್ ಯಾತ್ರೆಗೆ ಹೋಗುವವರಿಗೆ ಸೌದಿ ಶಾಕ್ ಕೊಟ್ಟಿದೆ.
ಅಧಿಕಾರಿಗಳ ಪ್ರಕಾರ, ಸೌದಿ ಸರ್ಕಾರವು ಅಲ್ಜೀರಿಯಾ, ಬಾಂಗ್ಲಾದೇಶ, ಯೆಮೆನ್, ಈಜಿಪ್ಟ್, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಇರಾಕ್, ಜೋರ್ಡಾನ್, ಮೊರಾಕೊ, ನೈಜೀರಿಯಾ, ಪಾಕಿಸ್ತಾನ, ಸುಡಾನ್, ಟುನೀಶಿಯಾ ದೇಶಗಳ ಪ್ರಯಾಣಿಕರಿಗೆ ಬಹು-ಪ್ರವೇಶ ವೀಸಾಗಳನ್ನು ನಿಷೇಧಿಸಿದೆ. ಹೆಚ್ಚುವರಿಯಾಗಿ, ರಿಯಾದ್ ಈ 14 ದೇಶಗಳಿಗೆ ಪ್ರವಾಸೋದ್ಯಮ, ವ್ಯವಹಾರ ಮತ್ತು ಕುಟುಂಬ ಭೇಟಿಗಳಿಗಾಗಿ ಒಂದು ವರ್ಷದ ಬಹು-ಪ್ರವೇಶ ವೀಸಾವನ್ನು ಅನಿರ್ದಿಷ್ಟ ಅವಧಿಗೆ ನಿಷೇಧಿಸಿದೆ.
ಕಳೆದ ವರ್ಷ ತೀವ್ರ ಶಾಖ ಮತ್ತು ಜನದಟ್ಟಣೆಯಿಂದಾಗಿ 1,200 ಕ್ಕೂ ಹೆಚ್ಚು ಹಜ್ ಯಾತ್ರಿಕರ ಸಾವು ಸೇರಿದಂತೆ ದುರಂತಗಳಿಗೆ ಕಾರಣವಾಗಿದೆ ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ಹೇಳಿದ್ದು, ಇದನ್ನು ತಡೆಯುವುದಕ್ಕಾಗಿ ವೀಸಾ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.
ಪರಿಷ್ಕೃತ ವೀಸಾ ನಿಯಮಗಳ ಅಡಿಯಲ್ಲಿ, ಮೇಲೆ ತಿಳಿಸಿದ ರಾಷ್ಟ್ರಗಳ ನಾಗರಿಕರು ಏಕ-ಪ್ರವೇಶ ವೀಸಾಗಳಿಗೆ ಮಾತ್ರ ಅರ್ಜಿ ಸಲ್ಲಿಸಬಹುದು, ಇದು 30 ದಿನಗಳ ಅವಧಿಗೆ ಮಾನ್ಯವಾಗಿರುತ್ತದೆ, ಆದರೆ ಹೊಸ ನಿಯಮಗಳು ಹಜ್, ಉಮ್ರಾ, ರಾಜತಾಂತ್ರಿಕ ಮತ್ತು ನಿವಾಸ ವೀಸಾಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಬಹು-ಪ್ರವೇಶ ವೀಸಾಗಳ ಅಮಾನತುಗೊಳಿಸುವಿಕೆಯನ್ನು “ತಾತ್ಕಾಲಿಕ” ಕ್ರಮ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ವಿಷಯವನ್ನು ಯಾವಾಗ ಪರಿಶೀಲಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ನಿರ್ದಿಷ್ಟ ಸಮಯವನ್ನು ನೀಡಲಾಗಿಲ್ಲ.
