Covid : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗುತ್ತದೆಯಾ? ಮುಂದಿನ ವಾರ ಶಾಲೆಗಳು ಆರಂಭವಾಗುವುದನ್ನು ಮುಂದೂಡಲಾಗುತ್ತದೆಯಾ? ಎಂಬ ವಿಚಾರ ಚರ್ಚೆಯಾಗುತ್ತಿದೆ. ಇದು ಪೋಷಕರಲ್ಲಿ ಆತಂಕದ ಜೊತೆಗೆ ಗೊಂದಲವನ್ನು ಉಂಟು ಮಾಡಿದೆ. ಆದರೆ ಇದೀಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಕುರಿತು ಮಹತ್ವದ ಅಪ್ಡೇಟ್ ಒಂದನ್ನು ನೀಡಿದ್ದಾರೆ.
ಹೌದು, ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಶಾಲೆ, ಕಾಲೇಜುಗಳನ್ನು ಬಂದ್ ಮಾಡಬಹುದು ಎಂಬ ಆತಂಕ ಪೋಷಕರಲ್ಲಿ ಮನೆ ಮಾಡಿದೆ. ಇದರ ನಡುವೆ ಶಾಲೆ ಆರಂಭ ಮುಂದೂಡಿಕೆಯಾಗಬಹುದು ಹಾಗೂ ಈಗಾಗಲೇ ಆರಂಭವಾಗಿರುವ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗುವುದು ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ. ಆದರೆ ಈಗ ಈ ಆತಂಕವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದೂರ ಮಾಡಿದ್ದಾರೆ.
ಈ ಕುರಿತಾಗಿ ಮಾತನಾಡಿದ ಸಚಿವರು “ಸದ್ಯಕ್ಕೆ 47 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಗಂಭೀರ ಎನ್ನುವ ಪರಿಸ್ಥಿತಿಯಲ್ಲಿಲ್ಲ. ಯಾರೂ ಐಸಿಯುವಿಗೆ ಅಡ್ಮಿಟ್ ಆಗುವಂತಹ ಪರಿಸ್ಥಿತಿಯಿಲ್ಲ. ಹೀಗಾಗಿ ಆತಂಕ ಬೇಡ. ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನನಗೆ ಅನಿಸುತ್ತಿಲ್ಲ. ಕೇರಳದಿಂದ ಕರ್ನಾಟಕಕ್ಕೆ ಬರಬಾರದು, ರಾಜ್ಯದೊಳಗೆ ಓಡಾಡಬಾರದು ಎಂದೆಲ್ಲಾ ಕಠಿಣ ನಿಯಮ ಹಾಕುವ ಅಗತ್ಯ ಕಂಡುಬಂದಿಲ್ಲ. ಇನ್ನೂ ಮೂರು-ನಾಲ್ಕು ದಿನ ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸದ್ಯಕ್ಕೆ ಶಾಲೆ, ಕಾಲೇಜು ಬಂದ್ ಮಾಡುವ ಯೋಚನೆಯಿಲ್ಲ” ಎಂದಿದ್ದಾರೆ.
