Shiradi Ghat: ವರುಣನ ರುದ್ರ ನರ್ತನಕ್ಕೆ ಮಲೆನಾಡು, ಕರಾವಳಿ ನಲುಗಿ ಹೋಗುತ್ತಿದೆ. ದಿನದಿಂದ ದಿನಕ್ಕೆ ಮಳೆಯ ಅಬ್ಬರ ಹೆಚ್ಚುತ್ತಿದ್ದು ಜನ ಓಡಾಡುವ ರಸ್ತೆಗಳ ಸಂಪರ್ಕ ಕಡಿತಗೊಳ್ಳುತ್ತಿದೆ. ಈಗಾಗಲೇ ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದ್ದು, ಇದೀಗ ಶಿರಾಡಿ ಘಾಟ್ (Shiradi Ghat) ರಸ್ತೆ ಸಂಪರ್ಕವೂ ಬಹುತೇಕ ಸದ್ಯದ ಮಟ್ಟಿಗೆ ಬಂದ್ ಆಗಿದೆ.
ಸಕಲೇಶಪುರ ಹಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ , ಸಕಲೇಶಪುರದ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದೆ.
ದೊಡ್ಡತಪ್ಪಲು ಸಮೀಪ ಒಂದು ಟ್ಯಾಂಕರ್, ಒಂದು ಟಿಪ್ಪರ್ ಮತ್ತು ಎರಡು ಕಾರುಗಳು ಭೂಕುಸಿತದ ಕೆಸರಿನಲ್ಲಿ ಸಿಲುಕಿಕೊಂಡಿವೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಭಾರೀ ಭೂಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಪ್ರಯಾಣಿಕರು ಹಾಗೂ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
