ಶಿರೂರು ಟೋಲ್ ಗೇಟ್‌ನಲ್ಲಿ ಇಂದು ನಸುಕಿನ ವೇಳೆ ಸಂಭವಿಸಿದ ಅಪಘಾತದಲ್ಲಿ ಟೋಲ್ ಸಿಬ್ಬಂದಿ ಸಾವನ್ನಪ್ಪಿದ ಘಟನೆ ನಡೆದಿದೆ.
ರಾಘವೇಂದ್ರ ಮೇಸ್ತ (44) ಮೃತಪಟ್ಟ ದುರ್ದೈವಿ. ಗಂಭೀರ ಗಾಯಗೊಂಡು ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಾತ್ರಿ 2 ಗಂಟೆ ವೇಳೆ ವೇಗವಾಗಿ ಬಂದ ಕಾರು ಟೋಲ್ ಗೇಟ್ ಮುಂಭಾಗದ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯದಲ್ಲಿದ್ದ ರಾಘವೇಂದ್ರ ಮೇಸ್ತ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಕಾರಿನಲ್ಲಿರುವವರು ಕೂಡ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಗೆ ಟೋಲ್ ಗೇಟ್ ನಿರ್ವಹಣೆ ಮಾಡುತ್ತಿರುವವರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಬೆಳಿಗ್ಗೆಯಿಂದಲೇ ಪ್ರತಿಭಟನೆ ಆರಂಭವಾಗಿದೆ. ಟೋಲ್ ಸಿಬ್ಬಂದಿ ಮೃತಪಟ್ಟ ನಂತರವೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ, ಮೃತ ರಾಘವೇಂದ್ರ ಮೇಸ್ತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಮೇಸ್ತ ಜಾತಿ ಹಾಗೂ ಸ್ಥಳೀಯರ ಸಹಿತ ಸುಮಾರು 125 ಜನರು ಶಿರೂರು ಟೋಲ್ ಬಳಿ ಪ್ರತಿಭಟನೆ ನಡೆಸಿದರು.
