Shivamogga: ವಿಧಿಯಾಟದ ಮುಂದೆ ನಾವೆಲ್ಲ ಕೇವಲ ಪಾತ್ರದಾರಿಗಳು ಎಂಬುದಕ್ಕೆ ನಿದರ್ಶನ ಎಂಬಂತೆ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ಮೊದಲೇ ತಾಯಿಯ ಪ್ರೀತಿಯಿಂದ ವಂಚಿತರಾಗಿದ್ದ ಮಕ್ಕಳಿಗೆ ಆಸರೆಯಾಗಿ ಇದ್ದ ಒಂದು ಜೀವ ಎಂದರೆ ತಂದೆ. ಆದರೆ, ಕ್ರೂರ ವಿಧಿಗೆ ಈ ಕುಟುಂಬ ಖುಷಿಯಾಗಿ ಇರುವುದು ಏಕೆ ಮುನಿಸು ತರಿಸಿತೋ ತಿಳಿಯದು. ಹೀಗಾಗಿ, ಇಬ್ಬರು ಹೆಣ್ಣು ಮಕ್ಕಳ ಮದುವೆಯ ಸಂಭ್ರಮ ಕಣ್ತುಂಬಿ ಕೊಳ್ಳುವ ಕಾತುರದಲ್ಲಿದ್ದ ತಂದೆ ಮದುವೆಯ ಹಿಂದಿನ ದಿನವೇ ಕಾಲದ ಕರೆಗೆ ಓಗೊಟ್ಟು ಅಪಘಾತದಲ್ಲಿ ಅಸುನೀಗಿದ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಶಿವಮೊಗ್ಗದ (Shivamogga) ಸಾಗರ ತಾಲೂಕಿನ ಆಚಾಪುರ ಗ್ರಾಪಂ ವ್ಯಾಪ್ತಿಯ ಚನ್ನಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ 58 ವರ್ಷದ ಮಂಜುನಾಥ ಗೌಡ ಈ ದಾರುಣ ಘಟನೆಯಲ್ಲಿ ಬಲಿಯಾದ ವ್ಯಕ್ತಿ. ಇಬ್ಬರು ಹೆಣ್ಣು ಮಕ್ಕಳ ಮದುವೆ ನಡೆಸಲು ಭರದ ಸಿದ್ಧತೆ ನಡೆಸಿ ಸಂಭ್ರಮ ಮನೆ ಮಾಡಬೇಕಾಗಿದ್ದ ಮನೆಯಲ್ಲಿ ಇದೀಗ, ಮದುಮಕ್ಕಳ ತಂದೆಯ ಸಾವಿನಿಂದ ಸೂತಕದ ಛಾಯೆ ಆವರಿಸಿದೆ.
ಮೂಲತಃ ಬನವಾಸಿಯವರಾದ ಮಂಜುನಾಥ ಗೌಡ ತಮ್ಮ ಇಬ್ಬರು ಹೆಣ್ಣುಮಕ್ಕಳ ಮದುವೆ ನೆರವೇರಿಸುವ ನಿಟ್ಟಿನಲ್ಲಿ ಕುಟುಂಬ ಸಮೇತ ಚನ್ನಕೊಪ್ಪ ಗ್ರಾಮದ ತಮ್ಮ ಮಾವನ ಮನೆ ರುದ್ರಪ್ಪ ಗೌಡರ ಮನೆಗೆ ಆಗಮಿಸಿದ್ದರಂತೆ. ಕೆಂಜಗಾಪುರದ ಶ್ರೀ ವೀರಭದ್ರೇಶ್ವರ ದೇವಾಲಯ ಆವರಣದ ಸಭಾಭವನದಲ್ಲಿ ಜೂನ್ 28ರಂದು ಮಂಜುನಾಥ ಗೌಡ ಅವರ ಇಬ್ಬರು ಸುಪುತ್ರಿಯರ ಮದುವೆಗೆ ಪೂರ್ವ ತಯಾರಿ ನಡೆಯುತ್ತಿತ್ತು. ಹೀಗಾಗಿ, ಮದುವೆ ಕಾರ್ಯಕ್ಕೆ ಅಗತ್ಯ ಸಾಮಗ್ರಿ ಖರೀದಿ ಮಾಡಲು ಆನಂದಪುರಕ್ಕೆ ಮನೆಯಿಂದ ಹೊರಟಿದ್ದ ಮಂಜುನಾಥ ಅವರು ರಾಷ್ಟ್ರೀಯ ಹೆದ್ದಾರಿಯಿಂದ ಬಸ್ ನಿಲ್ದಾಣದ ಪುತ್ರಿಯರ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆಗೆ ಮಂಜುನಾಥ ಗೌಡರಿಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ನಡೆದಿದೆ.
ಮೂರು ವರ್ಷಗಳ ಹಿಂದೆ ಮಂಜುನಾಥ ಗೌಡರ ಪತ್ನಿ ಬನವಾಸಿಯಲ್ಲಿ ಟ್ರ್ಯಾಕ್ಟರ್ ಅಪಘಾತದಲ್ಲಿ ನಿಧನರಾಗಿದ್ದಾರೆ. ಆ ಬಳಿಕ ಇಬ್ಬರು ಮಕ್ಕಳನ್ನು ಸಾಕುತ್ತಿದ್ದ ಮಂಜುನಾಥ್ ಗೌಡ ಇದೀಗ, ಮೃತಪಟ್ಟಿದ್ದು ಮನೆಗೆ ಆಧಾರಸ್ತಂಭವಾಗಿದ್ದ ಜೀವವೊಂದು ವಿಧಿಯ ಆಟಕ್ಕೆ ಬಲಿಯಾಗಿದ್ದು, ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಮಕ್ಕಳು ತಬ್ಬಲಿಗಳಾಗಿದ್ದಾರೆ.
ಮಂಜುನಾಥ ಗೌಡರ ಶವದ ಮರಣೋತ್ತರ ಪರೀಕ್ಷೆಯ ಬಳಿಕ ಬನವಾಸಿಯಲ್ಲಿ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆದಿದೆ. ಡಿಕ್ಕಿ ಹೊಡೆದ ಕಾರು ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದು, ಸದ್ಯ, ಈ ಪ್ರಕರಣದ ಕುರಿತಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ ಮೊದಲೇ ನಿಶ್ಚಯಿಸಿದಂತೆ ಜೂ.28ರ ಇಂದು ಕೆಂಜಗಾಪುರದಲ್ಲಿ ಮಂಜುನಾಥ ಗೌಡರ ಇಬ್ಬರು ಪುತ್ರಿಯರ ವಿವಾಹ ನೆರವೇರಲಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: Shocking news: ತವರಿಗೆ ಹೋದ ಪತ್ನಿ, ಮಂತ್ರವಾದಿಯ ಜತೆ ಪರಾರಿ
