Karnataka Gvt: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂಬುದು ಹಲವು ದಶಕಗಳ ಕೂಗು. ಕಳೆದ ಸಮಯದಲ್ಲಿ ಬಿಜೆಪಿ ಸರ್ಕಾರವು ಚುನಾವಣೆ ವೇಳೆ ತಾನು ಇದನ್ನು ಮಾಡೇ ಮಾಡುತ್ತೇನೆ ಎಂದು ಘಂಟಾಘೋಷವಾಗಿ ಕೂಗಿ ಹೇಳಿ ಮತ ಬಾಚಲು ಪ್ರಯತ್ನಿಸಿತ್ತು. ಬಳಿಕ ಇದು ಅಲ್ಲಿಗೆ ನಿಂತು, ಮತ್ತೆ ಕರಾವಳಿ ಜನತೆಗೆ ನಿರಾಸೆಯನ್ನು ಉಂಟು ಮಾಡಿತ್ತು. ಆದರೆ ಇದೀಗ ರಾಜ್ಯ ಸರ್ಕಾರವು ಮತ್ತೆ ಈ ಭರವಸೆಗೆ ನೀರುಣಿಸಿ ಚಿಗುರೊಡೆಸುವ ಪ್ರಯತ್ನಕ್ಕೆ ಮುಂದಾಗಿದೆ.
ಹೌದು, ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಮಾಡುವ ಸಲುವಾಗಿ ಮೊದಲ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ ಮಾನದಂಡಗಳ ಅಧ್ಯಯನ ನಡೆಸಲು ಐದು ಸದಸ್ಯರ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಗಾಯತ್ರಿ ಕೆ.ಎಂ. ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ಆಂಧ್ರಪ್ರದೇಶದಲ್ಲಿ ಅನುಸರಿಸುತ್ತಿರುವ ಮಾನದಂಡಗಳನ್ನು ವಿವರವಾಗಿ ಅಧ್ಯಯನ ನಡೆಸುವ ಜವಾಬ್ದಾರಿ ವಹಿಸಲಾಗಿದೆ.
ಸಮಿತಿಯಲ್ಲಿ ಕಾನೂನು ಇಲಾಖೆಯ ಉಪ ಕಾರ್ಯದರ್ಶಿ ವನಿತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪ ಕಾರ್ಯದರ್ಶಿ ಮೂರ್ತಿ ಕೆ.ಎನ್, ಉಪ ಕಾರ್ಯದರ್ಶಿ ತಾರಾನಾಥ ಗಟ್ಟಿ ಕಾಪಿಕಾಡ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯ ಸುಧಾಕರ ಶೆಟ್ಟಿ ಸದಸ್ಯರಾಗಿದ್ದಾರೆ
ಈ ಹಿಂದೆ ಆಂಧ್ರಪ್ರದೇಶದಲ್ಲಿ ಅಲ್ಲಿನ ಇತರ ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಅಂಗೀಕಾರ ಮಾಡಿರುವ ಬಗ್ಗೆ ಮಾಹಿತಿಯನ್ನು ತರಿಸಿಕೊಳ್ಳಲಾಗಿತ್ತು. ಇದೀಗ ಆಂಧ್ರಪ್ರದೇಶದಲ್ಲಿ ಎರಡನೇ ಭಾಷೆಯನ್ನು ಯಾವ ಸ್ವರೂಪ, ಪ್ರಮಾಣದಲ್ಲಿ ಅಧಿಕೃತ ಭಾಷೆ ಎಂದು ಜಾರಿಗೊಳಿಸಲಾಗಿದೆ ಎಂಬುದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಸರ್ಕಾರ ಈ ಸಮಿತಿಯನ್ನು ರಚಿಸಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಆದೇಶಿಸಿದೆ
