Home » ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿಗೆ ಶಾಲೆಯಲ್ಲಿ ಥಳಿತ

ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿಗೆ ಶಾಲೆಯಲ್ಲಿ ಥಳಿತ

0 comments

ಚಿಕ್ಕಮಗಳೂರು: ನಗರದ ಪ್ರಸಿದ್ಧ ಶಾಲೆಯೊಂದರಲ್ಲಿ ಅಯ್ಯಪ್ಪ ಮಾಲೆ ಧರಿಸಿ ಬಂದ 7ನೇ ತರಗತಿ ವಿದ್ಯಾರ್ಥಿಗೆ ಶಾಲಾ ಪ್ರಾಂಶುಪಾಲರು ಥಳಿಸಿರುವ ಘಟನೆ ನಡೆದಿದ್ದು, ಶರ್ಟ್‌ ಒಳಗೆ ಬನಿಯನ್‌ ಏಕೆ ಹಾಕಿಲ್ಲ ಎಂದು ವಿಚಾರಿಸಿ ಶಬರಿಮಲೆ ಯಾತ್ರೆಗೆ ಹೋಗಲು ರಜೆ ನೀಡುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಕಾರ್ಯಕರ್ತರು, ಮಾಲಾಧಾರಿಗಳು ಶಾಲೆಯ ಮುಂದೆ ಜಮಾಯಿಸಿದ್ದು, ಆಕ್ರೋಶ ವ್ಯಕ್ತಪಡಿಸಿದರು. ಹಿಜಾಬ್‌ ವಿಚಾರದಲ್ಲಿ ಕಾನೂನು ಹೇಗಿದೆಯೋ ಇಲ್ಲಿಯೂ ಹಾಗೆಯೇ ವರ್ತಿಸಿ. ಇಲ್ಲದಿದ್ದರೆ ನಿಮ್ಮ ಸಂಸ್ಥೆ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸರಕಾರದ ಆದೇಶ ಇಲ್ಲದಿದ್ದರೂ ನಿಮ್ಮ ಹಬ್ಬಕ್ಕೆ 15 ದಿನ ರಜೆ ನೀಡುವ ನೀವು ಸಂಪ್ರದಾಯದಂತೆ ಶಬರಿಮಲೆಗೆ ಹೋಗುವ ಬಾಲಕನಿಗೆ ರಜೆ ನೀಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮಕ್ಕಳ ಧಾರ್ಮಿಕ ಭಾವನೆಗೆ ಧಕ್ಕೆ ತಂದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಗಮನಿಸಿದ ಶಾಲೆಯ ಪ್ರಾಂಶುಪಾಲರು, ಪ್ರತಿಭಟನಾಕಾರರ ಮುಂದೆ ಬಂದು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಸದ್ಯಕ್ಕೆ ಈಗ ಪರಿಸ್ಥಿತಿ ಶಾಂತವಾಗಿದೆ.

You may also like