ಸುಬ್ರಹ್ಮಣ್ಯ: ವಿಶ್ವ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ದೇಗುಲದ ಹೆಣ್ಣಾಣೆಯು ಸಿಬ್ಬಂದಿಯನ್ನು ಸೊಂಡಿಲಿನಿಂದ ನೀರಿಗೆ ಎಸೆದು ಹಾಕಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಪ್ರಯುಕ್ತ ಆಯೋಜಿಸಿದ್ದ ನೀರು ಬಂಡಿ ಉತ್ಸವದ ವೇಳೆ ಈ ಘಟನೆ ನಡೆದಿದ್ದು, ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು.
ದೇವಳದ ಆನೆಯು ಭಕ್ತರೊಂದಿಗೆ ನೀರಾಟ ಆಡುತ್ತ, ನೀರು ಎರೆಚುತ್ತಾ ಬೆರೆಯುತ್ತ ಆಟವಾಡುತ್ತಿತ್ತು. ಆಗ ದೇವಸ್ಥಾನದ ಸಿಬ್ಬಂದಿಯು ಆನೆಯ ಜತೆ ನೀರು ಎರಚಾಟದಲ್ಲಿ ತೊಡಗಿದ್ದ ಜನರನ್ನು ದೂರ ಇರಿಸುವ ಪ್ರಯತ್ನದಲ್ಲಿ ಆನೆ ಮತ್ತು ಭಕ್ತರ. ಮಧ್ಯೆ ಬಂದಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಯಶಸ್ವಿನಿ ಆನೆ ಇದ್ದಕ್ಕಿದ್ದಂತೆ ಅಡ್ಡ ಬಂದ ಸಿಬ್ಬಂದಿಯನ್ನು ಸೊಂಡಿಲಿನಿಂದ ಎಳೆದು ನೀರಿಗೆ ಎಸೆದಿದೆ. ಸದ್ಯ ಈ ಘಟನೆಯ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ಘಟನೆ ನಡೆದ ಕೆಲ ಕ್ಷಣದಲ್ಲೇ ಯಶಸ್ವಿನಿ ಆನೆ ಮತ್ತೆ ಶಾಂತವಾಗಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲ. ಮಕ್ಕಳು, ಭಕ್ತರು ಆನೆಗೆ ನೀರೆರಚಿದರೆ, ಆನೆ ಸೊಂಡಿಲಿನಿಂದ ಅವರತ್ತ ನೀರು ಚಿಮುಕಿಸಿದೆ. ಸಿಬ್ಬಂದಿಗೂ ಯಾವುದೇ ಗಾಯವಾಗಿಲ್ಲ.
