Sullia: ನೂಜೋಡಿ ಮಾಪಾಲ ಮನೆ ನಿವಾಸಿ ಶೇಖರ ಮಲೆಕುಡಿಯರ ಪತ್ನಿ ಮಧುರಾ (29ವ) ಹೆರಿಗೆ ನಂತರದಲ್ಲಿ ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಜೂ 4 ರಂದು ನಡೆದಿದೆ.
ಸುಳ್ಯ (Sullia) ತಾಲೂಕು ಸಂಪಾಜೆ ಗ್ರಾಮದ ಕೊಯನಾಡು ಬಾಬು ಮಲೆಕುಡಿಯ ಮತ್ತು ಚಿನ್ನಮ್ಮ ದಂಪತಿ ಪುತ್ರಿಯಾದ ಮಧುರಾ ಆರು ವರ್ಷಗಳ ಹಿಂದೆ ನಾರಾವಿ ಗ್ರಾಮದ ನೂಜೋಡಿ ಮನೆ ನಿವಾಸಿ ಶೇಖರ ಮಲೆಕುಡಿಯ ಅವರೊಂದಿಗೆ ವಿವಾಹವಾಗಿದ್ದರು. ಮಧುರಾರಿಗೆ ಅವರಿಗೆ ಮೂರುವರೆ ವರ್ಷದ ಗಂಡು ಮಗುವಿದ್ದು, ಎರಡನೆ ಮಗುವಿನ ಹೆರಿಗೆಗಾಗಿ ಜೂ.2ರಂದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಜೂ.3ರಂದು ಸಂಜೆ 6.45ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಅವರಿಗೆ ರಾತ್ರಿ 9 ಗಂಟೆಗೆ ತೀವ್ರ ರಕ್ತಸ್ರಾವ ಉಂಟಾಗಿತ್ತು. ತಕ್ಷಣ ಎಚ್ಚೆತ್ತ ವೈದ್ಯರು ಮಧುರಾ ಅವರನ್ನು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ರಾತ್ರಿ 11.30ಕ್ಕೆ ಕರೆತಂದು ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 12.37ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಧುರಾ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು, ಅಂತಿಮ ಸಂಸ್ಕಾರಕ್ಕೆ ತಯಾರಿ ಮಾಡಲಾಗಿತ್ತು. ಈ ನಡುವೆ ಮರಣೋತ್ತರ ಪರೀಕ್ಷೆ ನಡೆಸದೆ ಶವ ಹಸ್ತಾಂತರಿಸಿದ ಕುರಿತು ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು ಮತ್ತಿತರರು ಜಿಲ್ಲಾ ಆರೋಗ್ಯಾಧಿಕಾರಿ ಹಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು.
ಮಧುರಾ ಅವರ ಸಾವಿಗೆ ವೈದ್ಯಾಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ, ಮರಣೋತ್ತರ ಪರೀಕ್ಷೆ ನಡೆಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು, ಮಗುವಿನ ಭವಿಷ್ಯಕ್ಕಾಗಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಮೃತ ಮಧುರಾ ಅವರ ಕುಟುಂಬಸ್ಥರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
