Supreme Court: ಕರ್ನಲ್ ಸೋಫಿಯಾ ಖುರೇಷಿ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಸಂಬಂಧ, ʼ ನಾನು ಕ್ಷಮಾಪಣೆ ಕೇಳಿದ್ದೇನೆ. ಆದ್ದರಿಂದ ನನ್ನ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದುʼ ಎಂದು ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರ ವಾದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂಕೋರ್ಟ್, ʼಕ್ಷಮಾಪಣೆ ಕೇಳಿದ ವಿಡಿಯೋವನ್ನು ನಾವು ನೋಡಿದ್ದೇವೆ. ನೀವು ಮೊಸಳೆ ಕಣ್ಣಿರು ಹಾಕಿದ್ದೀರಿ ಅಥವಾ ಕಾನೂನು ಕ್ರಮಗಳನ್ನು ತಪ್ಪಿಸಿಕೊಳ್ಳಲು ಕ್ಷಮೆ ಕೇಳಿದ್ದೀರಿʼ ಎಂದು ಹೇಳಿದೆ.
ಇಂದು (ಸೋಮವಾರ ಮೇ 19) ಮಧ್ಯಪ್ರದೇಶ ಪೊಲೀಸರಿಗೆ ಸುಪ್ರೀಂಕೋರ್ಟ್ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲು ಸೂಚಿಸಿದೆ. ಮಂಗಳವಾರ ಬೆಳಿಗ್ಗೆ 10 ರ ಒಳಗೆ ಎಸ್‌ಐಟಿ ರಚಿಸಬೇಕು. ಐಜಿ ಸ್ಥಾನಮಾನದ ಅಧಿಕಾರಿಯೊಬ್ಬರು ಇದರ ನೇತೃತ್ವ ವಹಿಸಬೇಕು. ಮಹಿಳಾ ಅಧಿಕಾರಿಯೂ ಇದರಲ್ಲಿ ಇರಬೇಕು. ಮೇ 28 ರ ಒಳಗಾಗಿ ತಂಡವು ತನ್ನ ಮೊದಲ ವರದಿಯನ್ನು ಸಲ್ಲಿಸಬೇಕುʼ ಎಂದು ಪೀಠ ಆದೇಶ ನೀಡಿದೆ.
ಇಂಥ ಹೇಳಿಕೆಯಿಂದ ಇಡೀ ದೇಶಕ್ಕೆ ನಾಚಿಕೆಯಾಗಿದೆ. ನೀವು ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಯೋವನ್ನು ನೋಡಿದ್ದೇವೆ. ಅದ್ಯಾವ ಇಂದ್ರಿಯ ಶಕ್ತಿ ನಿಮ್ಮನ್ನು ತಡೆಯಿಯೋ ಗೊತ್ತಿಲ್ಲ. ನೀವು ಇನ್ನಷ್ಟು ಕೆಟ್ಟ ಮಾತುಗಳನ್ನು ಆಡಲು ಬಯಸಿದ್ದೀರಿ. ನಿಮಗೆ ನಾಚಿಕೆಯಾಗಬೇಕು. ಇದು ಯಾವ ಸೀಮೆಯ ಕ್ಷಮಾಪಣೆ? ನಮಗೆ ನಿಮ್ಮ ಕ್ಷಮಾಪಣೆ ಬೇಡ. ಕಾನೂನಿನಡಿಯಲ್ಲಿ ನಿಮ್ಮ ಜೊತೆ ಹೇಗೆ ವ್ಯವಹರಿಸಬೇಕು ಎಂದು ನಮಗೆ ಗೊತ್ತು. ಕ್ಷಮಾಪಣೆ ಕೇಳಲು ನೀವೇನು ನ್ಯಾಯಾಂಗ ನಿಂದನೆ ಮಾಡಿಲ್ಲ. ತಪ್ಪು ಮಾಡುವುದು ಆಮೇಲೆ ಕೋರ್ಟ್‌ಗೆ ಬಂದು ಕ್ಷಮಾಪಣೆ ಕೇಳುವುದು. ಇದೆಂಥಾ ವರ್ತನೆ? ಎಂದು ಪೀಠ ಹೇಳಿದೆ.
