Surathkal: ಸಸಿಹಿತ್ಲು ಮೂಂಡಾ ಬೀಚ್‌ನಲ್ಲಿ ರವಿವಾರ ಸಂಜೆ ಸಮುದ್ರಕ್ಕೆ ಇಳಿದಿದ್ದ ನಾಲ್ವರು ಯುವಕರ ಪೈಕಿ ಓರ್ವ ಅಲೆಯ ಸೆಳೆತಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ. ಉಳಿದ ಮೂವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ಪಡುಪಣಂಬೂರು ಕಜಕತೋಟ ನಿವಾಸಿ, ದಿವಂಗತ ಅನ್ವರ್ ಅವರ ಪುತ್ರ ಮುಹಮ್ಮದ್ ಸಮೀರ್ (23) ಮೃತಪಟ್ಟ ಯುವಕ. ಐಮಾನ್ (23), ರಯೀಸ್ (22), ಹಳೆಯಂಗಡಿ ಬೋಳ್ಳೂರಿನ ನಿವಾಸಿ ಫಾಝಿಲ್ ಎಂಬುವವರನ್ನು ರಕ್ಷಣೆ ಮಾಡಲಾಗಿದೆ.
ನಿನ್ನೆ (ರವಿವಾರ) ಸಂಜೆ ವಾಯುವಿಹಾರಕ್ಕೆಂದು ಸಸಿಹಿತ್ಲು ಬೀಚ್‌ಗೆಂದು ನಾಲ್ವರು ಸ್ನೇಹಿತರು ಬಂದಿದ್ದು, ನೀರಿಗಿಳಿದು ಆಟವಾಡುತ್ತಿದ್ದಾಗ, ದೊಡ್ಡ ಅಲೆಯೊಂದು ನಾಲ್ವರನ್ನೂ ಸಮುದ್ರದೊಳಗೆ ಸೆಳೆದುಕೊಂಡಿದೆ. ಕೂಡಲೇ ಎಲ್ಲರೂ ಸಹಾಯಕ್ಕಾಗಿ ಕಿರುಚಿದ್ದಾರೆ. ಕೂಡಲೇ ಸಮೀಪದಲ್ಲಿ ಇದ್ದ ಸ್ಥಳೀಯ ಮೀನುಗಾರರು ದೋಣಿಯ ಸಹಾಯದಿಂದ ಮೂವರನ್ನು ರಕ್ಷಣೆ ಮಾಡಿದ್ದಾರೆ. ಆದರೆ ಮುಹಮ್ಮದ್ ಸಮೀರ್ ಅಷ್ಟರಲ್ಲೇ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.
ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲು ಮಾಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ಕಳುಹಿಸಿರುವುದಾಗಿ ವರದಿಯಾಗಿದೆ.
