ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಪ್ರಯಾಗರಾಜ್‌ಗೆ ಇಂದು ಭೇಟಿ ನೀಡಲಿದ್ದು, ಜೊತೆಗೆ ಮಹಿಳೆಯರಿಗೆ ಸಿಹಿಸುದ್ದಿಯೊಂದನ್ನು ತಂದಿದ್ದಾರೆ. ಸುಮಾರು 1.6 ಲಕ್ಷ ಸ್ವಸಹಾಯ ಗುಂಪುಗಳಿಗೆ ಸುಮಾರು ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಿದ್ದಾರೆ.
ದೀನದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಈ ಧನಸಹಾಯ ನೀಡಲಾಗುತ್ತಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಪ್ರಧಾನ ಮಂತ್ರಿಗಳ ಕಚೇರಿ, ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಹಿಳೆಯರ ಭಾಗವಹಿಸುವ ಸಾಧ್ಯತೆ ಇದೆ. ಸಮುದಾಯ ಹೂಡಿಕೆ ನಿಧಿಯನ್ನಾಗಿ ಸುಮಾರು 80 ಸಾವಿರ ಸ್ವಸಹಾಯ ಗುಂಪುಗಳು ತಲಾ 1.10 ಲಕ್ಷ ರೂಪಾಯಿಗಳನ್ನು ಹಾಗೂ ಆವರ್ತ ನಿಧಿಯ ರೂಪದಲ್ಲಿ 60 ಸಾವಿರ ಸ್ವಸಹಾಯ ಗುಂಪುಗಳಿಗೆ ತಲಾ 15 ಸಾವಿರ ರೂಪಾಯಿಗಳನ್ನು ನೀಡಲಾಗುವುದು ಎಂದಿದೆ.
ತಳಮಟ್ಟದಲ್ಲಿರುವ ಮಹಿಳೆಯರಿಗೆ ಅಗತ್ಯ ಕೌಶಲ, ಪ್ರೋತ್ಸಾಹ ಮತ್ತು ಸಂಪನ್ಮೂಲಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ 202 ಪೌಷ್ಟಿಕಾಂಶ ತಯಾರಿಕಾ ಘಟಕಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಪಿಎಂ ಕಚೇರಿ ಪ್ರಕಟಣೆ ಹೇಳಿದೆ.
