Home » ತಲವಾರು ದಾಳಿ; 2 ಯುವಕರು ಆಸ್ಪತ್ರೆಗೆ ದಾಖಲು

ತಲವಾರು ದಾಳಿ; 2 ಯುವಕರು ಆಸ್ಪತ್ರೆಗೆ ದಾಖಲು

by Praveen Chennavara
0 comments

ಉಡುಪಿ : ಬಾರ್‌ನ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರಿಗಾಗಿ ಸ್ಥಳಕ್ಕೆ ತೆರಳಿದ್ದ ವೇಳೆ ಆರೋಪಿಗಳ ತಂಡ ಏಕಾಏಕಿಯಾಗಿ ತಲವಾರು ದಾಳಿ ನಡೆಸಿದ ಪರಿಣಾಮ ಇಬ್ಬರು ಯುವಕರು ಗಾಯಗೊಂಡು ಬೈಂದೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ನಡೆದಿದೆ.

ಕಾಲ್ನೋಡು ನಿವಾಸಿ ರವಿ ಶೆಟ್ಟಿ ಹಾಗೂ ಪ್ರಶಾಂತ್ ಶೆಟ್ಟಿ ತಲವಾರು ದಾಳಿಗೊಳಗಾದವರು. ಇಬ್ಬರೂ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿರೂರು ಗ್ರಾಮದ ನೀರ್ಗದ್ದೆಯ ರೆಸ್ಟೋರೆಂಟ್‌ಗೆ ಬುಧವಾರ ರಾತ್ರಿ ಬಂದಿದ್ದ ಕಿರಣ್ ಪೂಜಾರಿ ಹಾಗೂ ಅಶೋಕ್ ಎಂಬವರು ಬಾರ್ ಮ್ಯಾನೇಜರ್ ಅಶ್ವಿಜ್ ಶೆಟ್ಟಿ ಬಳಿ ಹಫ್ತಾ ಕೊಡುವಂತೆ ಬೆದರಿಕೆಯೊಡ್ಡಿದ್ದಾರೆ. ಈ ವೇಳೆಯಲ್ಲಿ ಮ್ಯಾನೇಜರ್ ಹಾಗೂ ಆರೋಪಿಗಳ ಮಧ್ಯೆ ವಾಗ್ವಾದ ನಡೆದಿದ್ದು, ಕಿರಣ್ ಪೂಜಾರಿ ಹಾಗೂ ಅಶೋಕ್ ಏಕಾಏಕಿ ಬಾಟಲಿಯಿಂದ ಅಶ್ವಿಜ್ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಅಶ್ವಿಜ್ ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರಿಗಾಗಿ ಬಾರ್ ಮಾಲಕ ಕಾಲೋಡು ನಿವಾಸಿ ಅಣ್ಣಪ್ಪ ಶೆಟ್ಟಿ ಅವರು ತಮ್ಮ ಸ್ನೇಹಿತರಾದ ರವಿ ಶೆಟ್ಟಿ, ಪ್ರಶಾಂತ್ ಶೆಟ್ಟಿ ಅವರೊಂದಿಗೆ ಸ್ಥಳಕ್ಕೆ ತೆರಳಿದ್ದರು. ಹಿಂಬದಿ ಕಾರಿನಲ್ಲಿ ಅಣ್ಣಪ್ಪ ಶೆಟ್ಟಿಯವರ ಸ್ನೇಹಿತರು ಇಳಿಯುತ್ತಿರುವುದನ್ನು ಗಮನಿಸಿದ ಆರೋಪಿಗಳಾದ ಕಿರಣ್ ಪೂಜಾರಿ, ಅಶೋಕ ದೇವಾಡಿಗ ನೇರವಾಗಿ ಅಣ್ಣಪ್ಪ ಶೆಟ್ಟಿ ಸ್ನೇಹಿತ ರೊಂದಿಗೆ ಜಗಳಕ್ಕಿಳಿದಿದ್ದಾರೆ. ನೀವು ಅಣ್ಣಪ್ಪ ಶೆಟ್ಟಿಯವರ ಪರವಾಗಿ ಬಂದಿದ್ದೀರಾ ಎಂದು ಅವಾಚ್ಯವಾಗಿ ಬೈದು ಅವರ ಪರವಾಗಿ ಬಂದರೆ ನಿಮ್ಮನ್ನೂ ಕೂಡ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಹೊಟೇಲ್ ಬದಿಯಲ್ಲಿ ಈ ಮೊದಲೇ ತಂದಿರಿಸಿದ್ದ ತಲವಾರು ಹಾಗೂ ಹಾರೆಯಿಂದ ರವಿ ಶೆಟ್ಟಿ, ಪ್ರಶಾಂತ ಶೆಟ್ಟಿ ಅವರ ಮೇಲೆ ಹಲ್ಲೆ ಮುಂದಾಗಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಕೊಲೆ ಮಾಡುವ ಉದ್ದೇಶದಿಂದಲೇ ತಲವಾರನ್ನು ಬೀಸಿದ್ದು ಈ ಸಮಯ ರವಿ ಶೆಟ್ಟಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ತಲವಾರು ರವಿ ಶೆಟ್ಟಿ ಬೆನ್ನಿಗೆ ತಗುಲಿ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಘಟನೆಯ ವೇಳೆ ಪ್ರಶಾಂತ್ ಶೆಟ್ಟಿಯವರಿಗೂ ಗಾಯಗಳಾಗಿವೆ. ಈ ಬಗ್ಗೆ ಸಹ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment