Tamilunadu : ಬಹುಭಾಷ ನಟ ಕಮಲ್ ಹಾಸನ್ ಕನ್ನಡವು ತಮಿಳು ಭಾಷೆಯಿಂದ ಹುಟ್ಟಿದೆ ಎಂದು ಹೇಳಿಕೆ ನೀಡಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದು ಕಮಲ್ ಹಾಸನವರ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದ ಮಟ್ಟಕ್ಕೆ ತಲುಪಿತ್ತು. ಅಲ್ಲದೆ ಕನ್ನಡಿಗರು ಇದರಲ್ಲಿ ಯಶಸ್ವಿ ಕೂಡ ಆದರು. ಜೊತೆಗೆ ಕೋರ್ಟ್ ಕೂಡ ಕಮಲ್ ಹಾಸನ್ ಗೆ ಛೀಮಾರಿ ಹಾಕಿತ್ತು. ಇದೀಗ ಮತ್ತೆ ಇದೇ ವಿಚಾರಕ್ಕೆ ಸಂಬಂಧಪಟ್ಟಂತಹ ಸುದ್ದಿ ವೈರಲ್ ಆಗಿದೆ.
ಕಮಲ್ ಹಾಸನ್ ವಿವಾದದ ಬೆನ್ನಲ್ಲೇ ಇದೀಗ ತಮಿಳುನಾಡಿನ ಪಠ್ಯಪುಸ್ತಕಗಳಲ್ಲಿ ಕನ್ನಡವು ತಮಿಳಿನಿಂದ ಹುಟ್ಟಿದೆ ಎಂದು ಹೇಳಿಕೊಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಹೌದು ತಮಿಳು ಭಾಷೆಯಿಂದಲೇ ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಗಳು ಬಂದಿವೆ ಎಂದು ಹೇಳಲಾಗಿದೆ. ಇಲ್ಲವೇ ಈ ಭಾಷೆಗಳು ತಮಿಳಿನಿಂದಲೇ ಕವಲೊಡೆದಿವೆ ಎಂದು ತಮಿಳು ಪಠ್ಯದಲ್ಲಿ ಇದೆ ಎನ್ನಲಾಗಿರುವ ಅಂಶವು ಭಾರೀ ವಿವಾದಕ್ಕೆ ಕಾರಣವಾಗಿದೆ.
ತಮಿಳುನಾಡಿನ 7ನೇ ತರಗತಿಯ ಪಠ್ಯದಲ್ಲೇ ತಮಿಳು ಭಾಷೆಯಿಂದಲೇ ದಕ್ಷಿಣ ಭಾರತದ ವಿವಿಧ ಭಾಷೆಗಳ ಉದಯವಾಯಿತು ಎನ್ನುವ ಬಗ್ಗೆ ಉಲ್ಲೇಖವಿದೆ ಎನ್ನುವುದು ವೈರಲ್ ಆಗುತ್ತಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಕನ್ನಡಿಗ ಸಿದ್ದೇಗೌಡ ಶ್ಯಾಮ್ ಪ್ರಸಾದ್ ಅವರು ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಪಠ್ಯದಲ್ಲಿ ಕನ್ನಡ, ತೆಲಗು ಹಾಗೂ ಮಲಯಾಳಂಗಳ ತಾಯಿ ತಮಿಳು ಎಂಬ ಸುಳ್ಳು ದ್ರಾವಿಡ ಪ್ರಪಗಾಂಡ ಇದೆ (ಪಾಕಿಸ್ತಾನದ ಪಠ್ಯದಲ್ಲಿ 5,000 ವರ್ಷಗಳ ಇತಿಹಾಸ ಇದ್ದಂತೆ). ಕರ್ನಾಟಕ ರಾಜ್ಯ ಪಠ್ಯದ ಪ್ರತಿ ತರಗತಿಯಲ್ಲೂ ಶಿವಾಜಿಯ ಕಥೆಗಳಿವೆ (ಶಾಖೆಗಳಲ್ಲಿ ಹೇಳಿಕೊಡುವಂತೆ). ಕನ್ನಡಿಗರು ಕನ್ನಡಿಗರಾಗಿರದೆ “ನಾವು ದ್ರಾವಿಡರು,” “ನಾವು ಹಿಂದಿ ದೇಶದ ರಕ್ಷಕರು,” ಆಗುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ತಮಿಳುನಾಡಿನ 7ನೇ ತರಗತಿ ಪಠ್ಯದಲ್ಲಿ ಏನಿದೆ ?
ತಮಿಳುನಾಡಿನ 7ನೇ ತರಗತಿಯ ಪಠ್ಯದಲ್ಲಿ ಒಂದೇ ಭಾಷೆಯನ್ನು ಮಾತನಾಡುವ ಜನರು ವಿಭಿನ್ನ ಸ್ಥಳಗಳಲ್ಲಿ ವಾಸಿಸುತ್ತಾರೆ. ಅವರು ವಾಸಿಸುವ ಸ್ಥಳದ ಸ್ಥಳ ಮತ್ತು ನೈಸರ್ಗಿಕ ಅಡೆತಡೆಗಳು ಇತ್ಯಾದಿಗಳಿಂದಾಗಿ ಅವರು ಮಾತನಾಡುವ ಭಾಷೆಯಲ್ಲಿ ಸ್ವಲ್ಪ ಬದಲಾವಣೆಗಳಿವೆ. ಅವುಗಳ ನಡುವಿನ ಸಂಪರ್ಕ ಕಡಿಮೆಯಾದಾಗ ಈ ಬದಲಾವಣೆಗಳು ಹೆಚ್ಚಾಗುತ್ತವೆ. ಅವು ಹೊಸ ಭಾಷೆಯಾಗಿ ವಿಭಜನೆಯಾಗುತ್ತವೆ. ಈ ರೀತಿಯಲ್ಲಿ ರೂಪುಗೊಂಡ ಹೊಸ ಭಾಷೆಯನ್ನು ಉಪಭಾಷೆ ಎಂದು ಕರೆಯಲಾಗುತ್ತದೆ. ಕನ್ನಡ, ತೆಲುಗು, ಮಲಯಾಳಂ ಮುಂತಾದ ದ್ರಾವಿಡ ಭಾಷೆಗಳು ತಮಿಳಿನಿಂದ ಬೇರ್ಪಟ್ಟ ಉಪಭಾಷೆಗಳಾಗಿವೆ ಎಂದು ಮುದ್ರಿಸಲಾಗಿದೆ.
