Tatkal Ticket : ಕೆಲವೊಮ್ಮೆ ತುರ್ತು ಸಂದರ್ಭದಲ್ಲಿ ರೈಲು ಟಿಕೆಟ್ ಬುಕ್ ಮಾಡುವುದು ತುಂಬಾ ಕಷ್ಟವಾಗುತ್ತದೆ. ಒಮ್ಮೊಮ್ಮೆ ಟಿಕೆಟ್ ಕಾಲಿ ಇರುವುದಿಲ್ಲ, ನೆಟ್ವರ್ಕ್ ಸಮಸ್ಯೆ, ಹೀಗೆ ಬೇರೆ ಬೇರೆ ಕಾರಣಗಳಿಂದ ಟಿಕೆಟ್ ಖರೀದಿಸುವುದು ಸಾಧ್ಯವಾಗುವುದಿಲ್ಲ. ಇದಕ್ಕೆ ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕ್ ಪರಿಚಯಿಸಿ, ಜನರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದೆ. ಇದೀಗ ತತ್ಕಾಲ್ ಟಿಕೆಟ್ ಬುಕಿಂಗ್ ಗೆ ರೈಲ್ವೆ ಇಲಾಖೆಯು ಒಟಿಪಿಯನ್ನು ಕಡ್ಡಾಯಗೊಳಿಸಿದೆ.
ಹೌದು, ಮೀಸಲಾತಿ ಕೌಂಟರ್ಗಳಲ್ಲಿ ಕಾಯ್ದಿರಿಸಿದ ಎಲ್ಲಾ ತತ್ಕಾಲ್ ಟಿಕೆಟ್ಗಳಿಗೆ ಕಡ್ಡಾಯ ಒನ್-ಟೈಮ್ ಪಾಸ್ವರ್ಡ್ (ಒಟಿಪಿ) ಪರಿಶೀಲನೆಯನ್ನು ರೈಲ್ವೆ ಇಲಾಖೆ ಪರಿಚಯಿಸಿದೆ. ಈ ಮೂಲಕ ತತ್ಕಾಲ್ ಟಿಕೆಟ್ ಬುಕಿಂಗ್ ಸೌಲಭ್ಯದ ದುರುಪಯೋಗವನ್ನು ತಡೆಯಲು ಪ್ರಮುಖ ಹೆಜ್ಜೆ ಇಟ್ಟಂತಾಗಿದೆ. ಈ ಕ್ರಮವು ಶೀಘ್ರದಲ್ಲೇ ದೇಶಾದ್ಯಂತ ಎಲ್ಲಾ ರೈಲುಗಳನ್ನು ಒಳಗೊಳ್ಳುತ್ತದೆ.
ಅಂದಹಾಗೆ ಪ್ರಾಯೋಗಿಕ ಆಧಾರದ ಮೇಲೆ ಒಟಿಪಿ ಆಧಾರಿತ ಪರಿಶೀಲನೆಯನ್ನು ಪರಿಚಯಿಸಿದೆ. ರೈಲ್ವೆ ಸಚಿವಾಲಯವು ನವೆಂಬರ್ 17 ರಂದು ಈ ಒಟಿಪಿ ಆಧಾರಿತ ತತ್ಕಾಲ್ ಟಿಕೆಟಿಂಗ್ ವ್ಯವಸ್ಥೆಯನ್ನು ಆಯ್ದ ರೈಲುಗಳನ್ನು ಪೈಲಟ್ ಯೋಜನೆಯಾಗಿ ಪ್ರಾರಂಭಿಸಿತು. ಆರಂಭದಲ್ಲಿ ಕಡಿಮೆ ಸಂಖ್ಯೆಯ ರೈಲುಗಳಿಗೆ ಪರಿಚಯಿಸಲಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆಗಳು ಮತ್ತು ಕಾರ್ಯಾಚರಣೆಯ ಕಾರ್ಯಸಾಧ್ಯತೆಯ ಆಧಾರದ ಮೇಲೆ ಈ ವ್ಯವಸ್ಥೆಯನ್ನು ಶೀಘ್ರದಲ್ಲೇ 52 ರೈಲುಗಳಿಗೆ ವಿಸ್ತರಿಸಲಾಗಿದೆ.
