Telangana : ತೆಲಂಗಾಣದಲ್ಲಿ ಹೆರಿಗೆ ಸಂದರ್ಭದಲ್ಲಿ ಘೋರ ದುರಂತ ಒಂದು ನಡೆದಿದ್ದು ಹೆರಿಗೆ ಮಾಡಿಸುವ ವೇಳೆ ವೈದ್ಯರ ನಿರ್ಲಕ್ಷದಿಂದ ಮಗುವಿನ ರುಂಡ ಮತ್ತು ಮುಂಡವೇ ಬೇರ್ಪಟ್ಟು ಮಗು ಸಾವನ್ನಪ್ಪಿರುವ ಅಘಾತಕಾರಿ ಘಟನೆ ನಡೆದಿದೆ.
ತೆಲಂಗಾಣದ ವನಪರ್ತಿ ಜಿಲ್ಲೆಯ ಅಮರಚಿಂತ ಮಂಡಲದ ಚಂದ್ರಗಢ ಗ್ರಾಮದ ಗರ್ಭಿಣಿ ಅನಿತಾ ಅವರಿಗೆ ಏ.7ರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಾಗ ಅವರನ್ನು ಅಮರಚಿಂತ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಡರಾತ್ರಿ ವೇಳೆ ವೈದ್ಯರು ಇಲ್ಲದ ಕಾರಣ, ಲಭ್ಯವಿರುವ ಸಿಬ್ಬಂದಿಯು ಗರ್ಭಿಣಿಗೆ ಸಾಮಾನ್ಯ ಹೆರಿಗೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಎಷ್ಟೇ ಪ್ರಯತ್ನ ಪಟ್ಟರೂ ಮಗುವಿನ ತಲೆ ಹೊರಬರದ ಕಾರಣ, ಹೆರಿಗೆಯ ಮಧ್ಯದಲ್ಲಿಯೇ ಆಂಬ್ಯುಲೆನ್ಸ್ ಮೂಲಕ ಅವರನ್ನು ಆತ್ಮಕೂರು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದ್ರೆ ಅಲ್ಲೂ ಸಹ ಅರ್ಧದ ಹೆರಿಗೆಗೆ ಮಾಡುವುದು ಕಷ್ಟ ಎಂದು ವೈದ್ಯರು ಕೈಚೆಲ್ಲಿದ್ದಾರೆ.
ಆಗ ಗರ್ಭಿಣಿಯ ಕುಟುಂಬವು ಆಕೆಯನ್ನು ಆತ್ಮಕೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ, ಪರಿಸ್ಥಿತಿ ಈಗಾಗಲೇ ಹದಗೆಟ್ಟಿದ್ದರಿಂದ, ತಾಯಿ ಮತ್ತು ಮಗುವಿನಲ್ಲಿ ಒಬ್ಬರನ್ನು ಮಾತ್ರ ಉಳಿಸಲು ಸಾಧ್ಯ ಎಂದು ವೈದ್ಯರು ನಿರ್ಧರಿಸಿ, ಮಗುವಿನ ತಲೆಯನ್ನು ಮುಂಡದಿಂದ ಬೇರ್ಪಡಿಸಿ ತಾಯಿಯ ಜೀವವನ್ನು ಉಳಿಸಿದ್ದಾರೆ.
ಕುಟುಂಬದವರು ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿದ್ದು, ತಾಯಿಯ ಜೀವ ಉಳಿಸುವ ಅನಿವಾರ್ಯತೆ ಎದುರಾದಾಗ ಮಗುವಿನ ತಲೆ ಮತ್ತು ಮುಂಡವನ್ನು ಬೇರ್ಪಡಿಸಬೇಕಾಯಿತು ಎಂದು ವೈದ್ಯರು ಸಬೂಬು ಹೇಳಿದ್ದಾರೆಂಬ ಆರೋಪ ಕೇಳಿಬಂದಿದೆ.
