ಸಣ್ಣ ಮಕ್ಕಳಿಗೆ ಕಾರು ಅಂದ್ರೆ ಇಷ್ಟವೇ, ಕಾರು ಕಂಡಾಗ ಖುಷಿಯಿಂದ ಕಣ್ಣುಮಿಟುಕಿಸುತ್ತಾರೆ. ಆದರೆ ಇಲ್ಲಿ ಕೇರಳದ ವ್ಯಕ್ತಿಯೊಬ್ಬ ಬರೀ ತನ್ನ ಕಾರಿಗೆ ಒರಗಿ ನಿಂತಿದ್ದಾನೆ ಎಂಬ ಕಾರಣಕ್ಕೆ ಆರು ವರ್ಷದ ಬಾಲಕನ ಎದೆಗೆ ಕರುಣೆಯೇ ಇಲ್ಲದೆ ಕಾಲಿನಿಂದ ಜಾಡಿಸಿ ಒದ್ದಿರುವ ಘಟನೆಯೊಂದು ನಡೆದಿದೆ.
ರಸ್ತೆ ಬದಿ ನಿಂತಿದ್ದ ಕಾರಿಗೆ ಬಾಲಕ ಒರಗಿ ನಿಂತಿದ್ದ. ಇದನ್ನು ಕಂಡ ಕಾರಿನ ಮಾಲೀಕ ಬಾಲಕನ ಎದೆಗೆ ಜಾಡಿಸಿ ಒದ್ದಿದ್ದಾನೆ. ಆತ ಸಣ್ಣವನಾಗಿದ್ದರಿಂದ ಏನೂ ಹೇಳದೆ ಸುಮ್ಮನೆ ನಿಂತಿದ್ದಾನೆ. ಆದರೆ ಇದನ್ನು ಗಮನಿಸಿದ ಕೆಲವು ಸ್ಥಳೀಯರು ಕಾರಿನ ಬಳಿ ಜಮಾಯಿಸಿ ಚಾಲಕನನ್ನು ಪ್ರಶ್ನೆ ಮಾಡಿದ್ದಾರೆ. ನಂತರ, ಆ ವ್ಯಕ್ತಿ ಒದೆ ಬೀಳುತ್ತದೆ ಎಂದು ತಿಳಿದು ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಬಾಲಕನನ್ನು ರಾಜಸ್ಥಾನದ ವಲಸೆ ಕಾರ್ಮಿಕ ಕುಟುಂಬದಿಂದ ಬಂದವನಾಗಿದ್ದಾನೆ ಎನ್ನಲಾಗಿದೆ. ವ್ಯಕ್ತಿಯನ್ನು ಪೊನ್ನಿಯಂಪಾಲಂ ನಿವಾಸಿ ಶಿಹಶಾದ್ ಎಂದು ಗುರುತಿಸಲಾಗಿದೆ. ರಾತ್ರಿ 8:30ರ ಸುಮಾರಿಗೆ ನಡೆದ ಘಟನೆಯ ಕುರಿತು ಪ್ರತ್ಯಕ್ಷದರ್ಶಿ ಯುವ ವಕೀಲರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಪೊಲೀಸರು ಕಾರ್ಯಾಚರಣೆ ನಡೆಸಿ ಶುಕ್ರವಾರ ಬೆಳಗ್ಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಶೀಘ್ರವೇ ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭಾಧ್ಯಕ್ಷ ಹಾಗೂ ತಲಕ್ಕೇರಿ ಶಾಸಕ ಎಎನ್ ಶಂಪೀರ್ ಹೇಳಿದ್ದಾರೆ. ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ರಾಜ್ಯ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ, ಮಾನವೀಯತೆ ಎಂದರೆ ಅಂಗಡಿಯಿಂದ ಖರೀದಿಸುವ ವಸ್ತುವಲ್ಲ ಎಂದಿದ್ದಾರೆ.
ಈ ಘಟನೆ ನೋಡಿದರೆ ಆತ ಎಷ್ಟು ಕ್ರೂರಿ ಇರಬಹುದು ಎನಿಸುತ್ತದೆ. ಬಾಲಕ ಎಂದೂ ನೋಡದೆ ಒದ್ದಿರುವುದು ನಿಜಕ್ಕೂ ಆಘಾತಕಾರಿ ವಿಷಯವೇ. ದುಡ್ಡಿನಿಂದ ಮಾನವೀಯತೆ ಬರುವುದಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಇನ್ನೂ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
