Marriage: ಎರಡು ಕುಟುಂಬಗಳು ಸೇರಿ ಪರಸ್ಪರ ಒಪ್ಪಿಗೆಯೊಂದಿಗೆ ಮದುವೆ ಸುಸೂತ್ರವಾಗಿ ನಡೆಯಲು ಸಾವಿರ ವಿಘ್ನಗಳು ಬಂದರೂ, ಹಣೆಬರಹದಲ್ಲಿ ಗಂಡ ಹೆಂಡತಿ ಇವರೇ ಎಂದು ಬರೆದ ಮೇಲೆ ತಿಪ್ಪರ್ ಲಾಗ ಹಾಕಿದರೂ ಕೆಲವೊಮ್ಮೆ ವ್ಯರ್ಥ ಪ್ರಯತ್ನ ಆಗುತ್ತವೆ. ಅದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ವಧುವಿನ ಎಸ್ಕೇಪ್ ಪ್ಲಾನ್ ಆಗಿದೆ.
ಮೇ.3 ರಂದು ರಾಜಸ್ಥಾನದ ಸೈನಾ ಗ್ರಾಮದಲ್ಲಿ ಮದುವೆ (Marriage) ದಿನವೇ ವಧು ಓಡಿ ಹೋಗಿರುವ ಘಟನೆ ನಡೆದಿದೆ. ವರ ಹಾಗೂ ಅವರ ಕುಟುಂಬಸ್ಥರು ವಧು ಮನಿಷಾರ ಮನೆಗೆ ಮುಹೂರ್ತಕ್ಕಿಂತ ಮೊದಲೇ ಬಂದಿದ್ದಾರೆ. ಇನ್ನೇನು ಮದುವೆ ಶಾಸ್ತ್ರ ಯಶಸ್ವಿಯಾಗಿ ನಡೆಯಬೇಕು ಎನ್ನುವಷ್ಟರಲ್ಲೇ ವಧು ಹೊಟ್ಟೆ ನೋವೆಂದು ಹೇಳಿ ವಾಷ್ ರೂಮ್ ಹೋಗಿ ಬರುವುದಾಗಿ ಹೇಳಿದ್ದಾಳೆ. ಆಯಿತೆಂದು ಮಂಟಪದಲ್ಲೇ ವರ ಕಾದಿದ್ದಾನೆ.
ಆದರೆ ಆಸೆಯಲ್ಲಿ ವರ ಕಾದು ಕುಳಿತಿದ್ದೇ ಕುಳಿತಿದ್ದು, ವಧುವಿನ ಪತ್ತೆಯಿಲ್ಲ. ನಂತರ ಎಲ್ಲರೂ ವಧುವನ್ನು ಹುಡುಕಲು ಶುರು ಮಾಡಿದ್ದಾರೆ. ಇದಾದ ಕೆಲ ಸಮಯದ ಬಳಿಕ ವಧು ತನ್ನ ಸಹೋದರ ಸಂಬಂಧಿಯೊಬ್ಬನೊಂದಿಗೆ ಓಡಿಹೋಗಿದ್ದಾಳೆ ಎನ್ನುವುದು ಗೊತ್ತಾಗಿದೆ.
ಈ ಕುರಿತು ವರ ದೂರು ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ವಧುವಿನ ಮನೆಯಲ್ಲೇ ಸಿದ್ದವಾದ ಮಂಟಪದಲ್ಲೇ ತನ್ನ ಕುಟುಂಬದ 20 ಸದಸ್ಯರನ್ನು ವಧುವಿನ ಗ್ರಾಮದಲ್ಲೇ ನಿಲ್ಲಿಸಿ, ವರ ಸಹಿತ ವಧುವಿನ ಮನೆಯಲ್ಲೇ ಆಕೆ ಬರುವರೆಗೆ ಕಾದಿದ್ದಾರೆ.
ಕೊನೆಗೆ 13 ದಿನಗಳ ಬಳಿಕ ಅಂದರೆ ಮೇ.15 ರಂದು ವಧುವನ್ನು ಪೊಲೀಸರು ಪತ್ತೆ ಮಾಡಿದ್ದು, ಆಕೆಯನ್ನು ಪೊಲೀಸರು ಮನೆಗೆ ತಲುಪಿಸಿದ್ದಾರೆ. ಓಡಿ ಹೋದ ವಧು ಮನೆಗೆ ಬಂದ ಬಳಿಕ ಕುಟುಂಬಸ್ತರು ಮೊದಲು ನಿಶ್ಚಯವಾಗಿದ್ದ ವರನೊಂದಿಗೆ ಕೊಟ್ಟು ಮದುವೆ ಮಾಡಿಸಿ ಕಳುಹಿಸಿಕೊಟ್ಟಿದ್ದಾರೆ. ಒಟ್ಟಿನಲ್ಲಿ ವರನ ಶತ ಪ್ರಯತ್ನ ಸಫಲವಾಯಿತು.
