Mangalore: ಮಂಗಳೂರು: ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ! ಎನ್ನುವ ಹಾಗೆ ಯಾರದೋ ದುಡ್ಡು? ಯಾರಿಗೋ ದುಡ್ಡು? ಯಾರದೋ ಟ್ರೋಫಿ? ಅದೆಲ್ಲಿಯದೋ ಆಟಗಾರರು? ಅದರಲ್ಲೂ ಗೆದ್ದಿದ್ದು ಕೂಡಾ ಖಾಸಗಿ ಕ್ಲಬ್ ಒಂದರ ಪಂದ್ಯಾವಳಿಯ ಟ್ರೋಫಿಯನ್ನೇ ಹೊರತು ಅಂತರಾಷ್ಟ್ರೀಯ ಮಟ್ಟದ ತೀವ್ರ ಹಣಾಹಣಿಯ ರೋಚಕ ಪಂದ್ಯಾಟದ ಟ್ರೋಫಿಯನ್ನೇನಲ್ಲ!
ಆದರೂ ಅನಿವಾರ್ಯವಾಗಿರದಿದ್ದ ಇದರ ಸಂಭ್ರಮಾಚರಣೆಯಲ್ಲಿ ಹುಚ್ಚು ಅಭಿಮಾನಿಗಳ ಹುಚ್ಚಾಟದಿಂದಾಗಿ 11 ಮಂದಿಯ ಜೀವಗಳು ಹುಚ್ಚೆದ್ದು ಹೋದಂತೆ ವಿನಾಕಾರಣ ಹೇಳ ಹೆಸರಿಲ್ಲದೆ ಹೋಗಿರುವುದನ್ನು ನೋಡಿದರೆ ಇದನ್ನು ಹುಚ್ಚರ ಹುಚ್ಚಾಟ ಅನ್ನಬೇಕೋ? ವಿಪರ್ಯಾಸ ಅನ್ನಬೇಕೋ? ದುರಭಿಮಾನದ ದುರ್ವರ್ತನೆ ಅನ್ನಬೇಕೋ? ಹುಚ್ಚರ ಹುಚ್ಚುತನದ ಪರಮಾವಧಿ ಅನ್ನಬೇಕೋ? ಅಥವಾ ಹುಚ್ಚರಿಗಿಂತಲೂ ಹೆಚ್ಚಾದ ಬುದ್ಧಿ ಭ್ರಮಣೆಯ ಪರಿಭ್ರಮಣೆಯೋ? ಹುಚ್ಚರ ಸಂತೆ ಅನ್ನಬೇಕೋ? ಅಂತ ಏನೆಂದು ತಿಳಿಯುತ್ತಿಲ್ಲ.
ಆದರೆ ಮೊನ್ನೆ ನಡೆದ ‘ದುರಂತ ಸಂಭ್ರಮ’ದಲ್ಲಿ ಹುಚ್ಚು ಅಭಿಮಾನಿಗಳ ಹುಚ್ಚಾಟ, ಲಂಗು ಲಗಾಮಿಲ್ಲದ ಲಜ್ಜೆಗೆಟ್ಟ ಮೇರೆಮೀರಿದ ವರ್ತನೆ ಇವನ್ನೆಲ್ಲ ನೋಡಿದರೆ ನಿಜವಾದ ಹುಚ್ಚರೂ ಕೂಡಾ ಈ ರೀತಿಯ ದುರ್ವರ್ತನೆ ತೋರಲಿಕ್ಕಿಲ್ಲವೆoಬುದು ಸ್ಪಷ್ಟವಾಗುತ್ತದೆ. ಹೀಗಾಗಿಯೇ ಅಭಿಮಾನದ ಹೆಸರಲ್ಲಿ ಲಂಗು ಲಗಾಮಿಲ್ಲದೆ ಅತಿರೇಕದಿಂದ ಮೆರೆದ ಈ ಹುಚ್ಚಾಟದ ಹುಚ್ಚುತನವೇ ದುರಂತ ಸಂಭ್ರಮದಲ್ಲಿ ಈ ರೀತಿ 11ಜೀವಗಳು ದುರಂತ ಅಂತ್ಯವನ್ನು ಕಾಣುವತಾಗಲು ಕಾರಣವವಾಯಿತೆನ್ನುವುದನ್ನು ನೋಡಿ ನಿಜವಾದ ಹುಚ್ಛರೂ ಕೂಡಾ ಮುಸಿ ಮುಸಿ ನಗುವಂತಾಗಿದೆ.
ಎತ್ತ ಸಾಗುತ್ತಿದೆ ಯುವಕ ಯುವತಿಯರ ಮನಸ್ಥಿತಿ? ಮಾನ,ಮರ್ಯಾದೆ, ನಿಯತ್ತು, ನಿಯಮ, ನೀತಿ, ಸoಯಮ, ಸಂಸ್ಕಾರವನ್ನೆಲ್ಲಾ ಬಿಟ್ಟು ಮನಸ್ಸಿಗೆ ಬಂದ ಹಾಗೆ ಅಂಹoಕಾರದ ದುರ್ವರ್ತನೆ ತೋರುವುದೇ ಅಭಿಮಾನವೇ? ಅಥವಾ ಈ ರೀತಿ ತಮ್ಮ ಅಮೂಲ್ಯ ಜೀವಗಳು ವಿನಾ ಕಾರಣ ಹುಚ್ಚೆದ್ದು ಹೋಗುವಂತೆ ಹುಚ್ಚುತನಕ್ಕೆ ಬಲಿಯಾಗುವುದೇ ಅಭಿಮಾನವೇ? ತೀವ್ರ ಹಣಾಹಣಿಯ ಅಂತರಾಷ್ಟ್ರೀಯ ಮಟ್ಟದ ರೋಚಕ ಪಂದ್ಯಾವಳಿಯಲ್ಲಿ ಗೆಲುವನ್ನು ಸಾಧಿಸಿದರೆ ಸಂಭ್ರಮಿಸುವುದಕ್ಕೊಂದು ಅರ್ಥವಿದೆ. ಅದೂ ಕೂಡಾ ಈ ರೀತಿಯ ಹುಚ್ಚುತನದ ಸಂಭ್ರಮವನ್ನಲ್ಲ. ಆದರೆ ಆರ್ಸಿಬಿ ಕಪ್ ಎನ್ನುವುದು ಒಂದು ಖಾಸಗೀ ಕ್ಲಬ್ ನ ಪಂದ್ಯಾವಳಿಯ ಟ್ರೋಫಿ. ಇದರಲ್ಲಿನ ಆಟಗಾರರನ್ನು ಯಾರೋ ದುಡ್ಡಿನ ಕುಳಗಳು ಅದೆಷ್ಟೋ ದುಡ್ಡು ಚೆಲ್ಲಿ ಕ್ರಯಕ್ಕೆ ಕೊಂಡು ಕೊಂಡು ದುಡ್ಡು ಬಾಚಿಕೊಳ್ಳಲು ಆಡಿಸಿದ ಆಟವಾಗಿರುತ್ತದೆ. ಹೀಗಾಗಿ ಈ ಆಟಗಾರರು ಬಾಡಿಗೆಯ ಆಟಗಾರರoತೆ ತಮ್ಮನ್ನು ಕೊಂಡುಕೊಂಡ ದುಡ್ಡಿನ ಕುಳಗಳಿಗೆ ದುಡ್ಡು, ಟ್ರೋಫಿ, ಕೀರ್ತಿ ತಂದುಕೊಡಲಷ್ಟೇ ಹೋರಾಡಬೇಕಾಗುತ್ತದೆ.
ಹೀಗಾಗಿ ಇದು ಖಾಸಗೀ ಕ್ಲಬ್ ನ ಕಪ್ ಆದ ಕಾರಣ ಈ ಪಂದ್ಯಾವಳಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿ ಸಂದರ್ಭದಲ್ಲಿ ಮೂಡುವ ರಾಷ್ಟ್ರೀಯ ಐ್ಯಕ್ಯತಾ ಭಾವನೆಯ ಅಭಿಮಾನ ಮೂಡುವುದಿಲ್ಲ. ಆದರೂ ಹುಚ್ಚು ಅಭಿಮಾನದ ಕಿಚ್ಚು ಈ ಒಂದು ಪಂದ್ಯಾವಳಿಯನ್ನೂ ಸಹಾ ಅಂತರಾಷ್ಟ್ರೀಯ ಮಟ್ಟದ ಪಂದ್ಯಕ್ಕಿಂತಲೂ ಮಿಗಿಲಾಗಿ ಹುಚ್ಚು ಅಭಿಮಾನದ ಹುಚ್ಚುತನ ಮೂಡಿಸುವಂತೆ ಮಾಡಿ ಈ ರೀತಿ ದುರಂತ ಸಾವಿಗೆ ಕಾರಣವಾಗಿದ್ದು ಮಾತ್ರ ವಿಪರ್ಯಾಸವೆನಿಸುತ್ತದೆ.
ಅದರಲ್ಲೂ ಮುಖ್ಯವಾಗಿ ಕೇವಲ 8 ಗಂಟೆಗಳಲ್ಲೇ ವೈರಿ ರಾಷ್ಟ್ರದ ಹುಟ್ಟಡಗಿಸಿದ ನಮ್ಮ ಭಾರತೀಯ ಸೇನೆಯ ವೀರ ಪರಾಕ್ರಮಕ್ಕೆ ಈ ರೀತಿ ಸಂಭ್ರಮಾಚರಣೆ ಆಯೋಜಿಸಿದ್ದರೆ ಸರ್ಕಾರಕ್ಕೂ ಒಂದು ಹೆಸರಿತ್ತು. ಅದೇರೀತಿ ನಮ್ಮ ಸೇನೆಯಲ್ಲಿ ಸಾಹಸ, ಪರಾಕ್ರಮ ಮೆರೆದ ವೀರ ಯೋಧರಿಗೆ ಇಷ್ಟೇ ಸಂಖ್ಯೆಯ ಅಭಿಮಾನಿಗಳು ಅಷ್ಟೇ ಅಭಿಮಾನ, ಅಭಿನಂದನೆ, ಸೆಲ್ಯೂಟ್ ನೀಡಿ ಗೌರವಿಸಲು ಮುಂದಾಗುತ್ತಿದ್ದರೆ ಅದಕ್ಕೊಂದು ಮರ್ಯಾದೆಯೂ ಇತ್ತು. ಆದರೆ ಯಾರದೋ ಹೊಟ್ಟೆಕಿಚ್ಚಿನ ತೃಪ್ತಿಗಾಗಿ, ಯಾರಿಗೋ ದುಡ್ಡು, ಕಪ್, ಕೀರ್ತಿತಂದು ಕೊಡಲು ದುಡ್ಡುಕೊಟ್ಟು ಖರೀದಿಸಿದ ಬಾಡಿಗೆ ಆಟಗಾರರ ಈ ಕಾರ್ಪೊರೇಟ್ ಪಂದ್ಯಾವಳಿಗೆ ಅಷ್ಟೇನೂ ಮಹತ್ವ ಕೊಡಬೇಕಾದ ಅಗತ್ಯತೆ, ಅತಿರೇಕದ ಅಭಿಮಾನ ತೋರ್ಪಡಿಸುವ ಅನಿವಾರ್ಯತೆ ಇಲ್ಲವಾದರೂ ಕೋಟಿ ಚೆಲ್ಲುವ ಕೋಟಿ ದುಡ್ಡಿನ ಕುಳಗಳು ಈ ಖಾಸಗೀ ಪಂದ್ಯಾವಳಿಯನ್ನು ಅಂತರಾಷ್ಟ್ರೀಯ ಪಂದ್ಯಾವಳಿಗಿಂತಲೂ ಹತ್ತು ಪಟ್ಟು ಹೆಚ್ಚೆಂಬಂತೆ ಬಿಂಬಿಸಿ ವಿವಿಧ ಮಾಧ್ಯಮಗಳ ಮೂಲಕ ಅದಕ್ಕೆ ಒಂದಷ್ಟು ಒಗ್ಗರಣೆಯನ್ನೂ ಹಾಕಿಸಿ, ಅದರಲ್ಲಿ ಎಲ್ಲರನ್ನೂ ಸಿಲುಕಿಸುವಂತೆ ಮಾಡಿ, ಹುಚ್ಚು ಅಭಿಮಾನಿಗಳಿಗೆ ಇನ್ನಷ್ಟೂ ಹೆಚ್ಚು ಹುಚ್ಚು ಹಿಡಿಸುವಂತೆ ಮಾಡಿಸಿರುವುದು ಸ್ಪಷ್ಟವಾಗುತ್ತಿದೆ. ಆದರೆ ಬಂಡವಾಳಶಾಹಿಗಳು ಹುಚ್ಚು ಮನಸ್ಸಿನ ಹತ್ತುಮುಖಗಳ ಹುಚ್ಚು ಅಭಿಮಾನಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಪರೋಕ್ಷವಾಗಿ ದುಡ್ಡು ಕಬಳಿಸಲೆಂದೇ ರೂಪಿಸಿರುವ ಇಂತಹಾ ವ್ಯವಸ್ಥಿತ ಸಂಚಿನ ವಿಷವರ್ತುಲದೊಳಗೆ ಸಿಲುಕಿ ಈ ಷಡ್ಯಂತ್ರದ ಬಗ್ಗೆ ಅರ್ಥೈಸಿಕೊಳ್ಳದ ಇಂದಿನ ಯುವ ಜನಾಂಗ ಹುಚ್ಚರಾಗಿ ಈ ರೀತಿ ವಿನಾಕಾರಣ ಬೀದಿ ಹೆಣವಾಗುವುದು ದುರಂತವೇ ಸರಿ.
ಅಭಿಮಾನವೆಂಬುದು ಗೌರವದ ಸಂಕೇತ. ಆದರೆ ಅದು ತನ್ನ ಮಾನ ಮತ್ತು ಪ್ರಾಣವನ್ನು ಕಳೆದು ಕೊಳ್ಳುವಂತಿರಬಾರದು. ಅದೇ ರೀತಿ ಅಭಿಮಾನಕ್ಕೊಳಪಡುವ ವ್ಯಕ್ತಿಗಳ ಮಾನ, ಪ್ರಾಣ ಹರಣಕ್ಕೂ ಕಾರಣವಾಗಬಾರದು. ಇದಕ್ಕಾಗಿಯೇ ವರನಟ ಡಾ. ರಾಜ್ ಕುಮಾರ್ ಅಭಿಮಾನಿಗಳನ್ನು ‘ಅಭಿಮಾನಿ ದೇವರೆಂದು’ ಕರೆದಿರೋದು. ಹಾಗಾಗಿ ಅಭಿಮಾನಿಗಳು ಯಾವತ್ತೂ ದೇವರಾಗಿರಬೇಕೇ ಹೊರತು ಹುಚ್ಚಾಟವಾಡುವ ಹುಚ್ಚರಾಗಿ ಬೀದಿ ಹೆಣದ ಪ್ರೇತಾತ್ಮ ವಾಗಬಾರದು. ಅನ್ನಕೊಡುವ ಅನ್ನದಾತರ ಮೇಲೆ, ವಿದ್ಯೆ ಕಲಿಸುವ ಶಿಕ್ಷಕರ ಮೇಲೆ, ಇಡೀ ದೇಶಕ್ಕೇ ರಕ್ಷಣೆ ನೀಡುವ ವೀರ ಸೈನಿಕರ ಮೇಲೆ ಅಭಿಮಾನಪಡದ ಯುವ ಜನಾಂಗ ಮತ್ತು ಸಮಾಜ ಕ್ರಿಕೆಟ್ ಆಟಗಾರರ, ಸಿನಿಮಾ ತಾರೆಯರ ಮೇಲೆ ತಮ್ಮ ಅಭಿಮಾನವನ್ನೂ, ದುರಭಿಮಾನವನ್ನೂ, ಹುಚ್ಚಾಟವನ್ನೂ ಮೇರೆ ಮೀರಿ ಮೆರೆಯುತ್ತಾರೆಂದರೆ ಇದನ್ನು ನಮ್ಮ ಯುವ ಜನಾಂಗ, ಸಮಾಜದ ದೌರ್ಭಾಗ್ಯವೆನ್ನಲು ಅಡ್ಡಿಯಿಲ್ಲ.
