

ಗುರುವಾಯನಕೆರೆ: ಭಾರತವು ಜಗತ್ತಿನ ಸಾಂಸ್ಕೃತಿಕ ರಾಯಭಾರಿಯಾಗಿದೆ. ಹಲವಾರು ವಿದೇಶಿ ಆಕ್ರಮಗಳು ನಡೆದರೂ ಭಾರತೀಯ ಸಂಸ್ಕೃತಿಯನ್ನು ನಾಶಪಡಿಸಲಾಗಿಲ್ಲ. ಭಾರತೀಯ ಸಂಸ್ಕೃತಿಯ ಬೇರುಗಳು ಅಷ್ಟು ಆಳವಾಗಿವೆ ಎಂದು ಅಮೆರಿಕದ ಖ್ಯಾತ ವೈದ್ಯ ಡಾ.ಯು. ರಾಮಯ್ಯಗೌಡ ವಳಂಬ್ರ ಅವರು ಹೇಳಿದರು.
ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ. ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಪರಿಶ್ರಮ, ಆಸಕ್ತಿ, ಸಾಧಿಸುವ ಛಲ ಇವುಗಳಿದ್ದರೆ ಗುರಿ ಸಾಧನೆ ಸುಲಭವಾಗುತ್ತದೆ ಎಂದರು.
ಬೆಳ್ತಂಗಡಿ ತಾಲೂಕಿನ ವಳಂಬ್ರ ದಲ್ಲಿ ಜನಿಸಿ ಅಮೆರಿಕದಂತಹ ದೇಶದಲ್ಲಿ ವೈದ್ಯನಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಪ್ರತಿಯೊಬ್ಬರೂ ತಮಗೆ ಒದಗಿರುವ ಅವಕಾಶಗಳನ್ನು ಬಳಸಿಕೊಂಡು ಉನ್ನತ ಮಟ್ಟಕ್ಕೆ ಏರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಡಾ. ರಾಮಯ್ಯ ಗೌಡ ಅವರ ಅಮೆರಿಕಾ ಮೂಲದವರಾದ ಡಾ.ಕಾಣಿ ಯು. ಗೌಡ ಅವರು ಭಾರತೀಯ ಸಂಸ್ಕೃತಿ ಗೆ ತಾನು ಮಾರು ಹೋಗಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ವರನ್ನು ಸ್ವಾಗತಿಸಿದ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು “ನಮ್ಮ ಕಾಲೇಜಿನ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಸಾಧನೆಯನ್ನು ಮಾಡಲೆಂದೇ ಇಂತಹ ಸಾಧಕರನ್ನು ಕರೆಸಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತೇವೆ. ಅಮೆರಿಕದ ವೈದ್ಯ ದಂಪತಿಗಳು ನಮ್ಮ ಕಾಲೇಜಿಗೆ ಬಂದು ನಮ್ಮೊಂದಿಗೆ ಸಂವಾದ ನಡೆಸುತ್ತಿರುವುದು ಅತ್ಯಂತ ಸಂತೋಷದ ವಿಷಯ. ವಿದ್ಯಾರ್ಥಿಗಳು ಸಾಧಕರ ಮಾತುಗಳಿಂದ ಪ್ರೇರಿತರಾಗಿ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಬೇಕು ಎಂದು ಹೇಳುವ ಮೂಲಕ ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ವಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ವೈದ್ಯ ದಂಪತಿಗಳನ್ನು ಸನ್ಮಾನಿಸಲಾಯಿತು. ಅರಮಲೆಬೆಟ್ಟ ಕ್ಯಾಂಪಸ್ ನ ಪ್ರಾಚಾರ್ಯರಾದ ಡಾ. ಪ್ರಜ್ವಲ್ ಕಜೆ, ವಳಂಬ್ರ ಕುಟುಂಬಸ್ಥರಾದ ಗೋಪಾಲ ಕೃಷ್ಣ, ಪ್ರಸಾದ, ಭರತ್, ಉಪಪ್ರಾಚಾರ್ಯ ರೋಹಿತ್, ಆಡಳಿತಾಧಿಕಾರಿ ಕೀರ್ತಿನಿಧಿ, ಉಪನ್ಯಾಸಕರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಅನಿಕ ಮತ್ತು ತಂಡದವರು ಪ್ರಾರ್ಥನೆ ಹಾಡಿದರು. ಕನ್ನಡ ಉಪನ್ಯಾಸಕ ಎಸ್. ತಿಪ್ಪೇಸ್ವಾಮಿಯವರು ನಿರೂಪಿಸಿದರು.













