Belthangady : ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ SSLC ಪರೀಕ್ಷೆ ನಡೆಯುತ್ತಿದೆ. ಎಲ್ಲಾ ಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಉತ್ತಮ ಅಂಕವನ್ನು ಪಡೆಯಬೇಕೆಂದು ಅವರೆಲ್ಲರನ್ನು ಹುರಿದುಂಬಿಸಿ ಪರೀಕ್ಷೆಗಳಿಗೆ ಕಳಿಸುತ್ತಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದರೆ ಶಾಲೆಗೂ ಹಾಗೂ ನಮಗೂ ಕೀರ್ತಿ ಎಂಬುದು ಶಿಕ್ಷಕರ ಒಂದು ಆಸೆ. ಆದರೆ ಈ ಆಸೆ ವಿದ್ಯಾರ್ಥಿಗಳ ಜೀವನವನ್ನೇ ಹಾಳು ಮಾಡುವ ಮಟ್ಟಿಗೆ ಹೋದರೆ ಹೇಗಾದೀತು ಹೇಳಿ. ಹೌದು ಮಂಗಳೂರಿನ ಶಾಲೆಯ ಶಿಕ್ಷಕರು ಶಿಕ್ಷಕರಾದವರು ಮಾಡಬಾರದಂತಹ ಒಂದು ಕೃತ್ಯಕ್ಕೆ ಕೈ ಹಾಕಿದ್ದಾರೆ.
ಹೌದು, 100 ಪರ್ಸೆಂಟ್ ರಿಸಲ್ಟ್‌ಗಾಗಿ ಆಸೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಯೊಂದು ಎಡವಟ್ಟು ಮಾಡಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜ ಸರ್ಕಾರಿ ಪ್ರೌಢ ಶಾಲೆಯೊಂದು, ಮಕ್ಕಳ ಭವಿಷ್ಯದ ಜತೆ ಚೆಲ್ಲಾಟವಾಡಿದೆ. ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಕಾರಣ ನೀಡಿ ಇಬ್ಬರು ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ.
ಮುಖ್ಯ ಶಿಕ್ಷಕರು 100 ಪರ್ಸೆಂಟ್ ಫಲಿತಾಂಶ ದಾಖಲಿಸಬೇಕೆಂಬ ದುರುದ್ದೇಶದಿಂದಲೇ ಓದೋದರಲ್ಲಿ ಹಿಂದುಳಿದ ಇಬ್ಬರು ವಿದ್ಯಾರ್ಥಿನಿಯರಿಗೆ ಹಾಲ್ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ನಮ್ಮ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಇತ್ತ ವಿದ್ಯಾರ್ಥಿನಿಯರು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿಡಿಪಿಐ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆಗೆ ಪತ್ರ ಬರೆದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಇದರ ಬೆನ್ನಲ್ಲೇ ನಿನ್ನೆ ಶಾಲೆಗೆ ಭೇಟಿ ನೀಡಿದ್ದ ಬಿಇಓ ಹಾಲ್ ಟಿಕೆಟ್ ಕೊಡಿಸಿದ್ದು, ಉಳಿದ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೆ ಈ ಬಗ್ಗೆ ತನಿಖೆ ನಡೆಸುವುದಾಗಿ ಬಿಇಒ ಹೇಳಿದ್ದಾರೆ. ಅದೇನೆ ಇರಲಿ ಮಕ್ಕಳ ಭವಿಷ್ಯದ ಜತೆ ಹೀಗೆ ಚೆಲ್ಲಾಟ ಆಡುವವರಿಗೆ ಬಿಸಿ ಮುಟ್ಟಿಸಬೇಕಿದೆ. ಶಾಲೆಗೆ ಶೇಕಡ 100 ಫಲಿತಾಂಶ ಬರಬೇಕೆಂಬುದು ಶಿಕ್ಷಕರ ಆಸೆ. ಇದಕ್ಕಾಗಿ ಅವರು ಅವಿರತ ಶ್ರಮದಿಂದ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ಅವರೆಲ್ಲರನ್ನು ಹುರಿದುಂಬಿಸಿ ಉತ್ತಮ ಅಂಕ ಗಳಿಸುವಂತೆ ಮಾಡಬೇಕು. ಅದು ಬಿಟ್ಟು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೋರಿಸದೆ ನೂರು ಫಲಿತಾಂಶ ಪಡೆಯುವುದು ಎಷ್ಟರಮಟ್ಟಿಗೆ ಸರಿ. ಶಿಕ್ಷಕರಾದವರೇ ಈ ರೀತಿಯ ನೀಚ ಕೃತ್ಯ ಮಾಡುವುದು ನಿಜಕ್ಕೂ ವಿಷಾದನೀಯ.
