Kodagu Rain: ಕೊಡಗು ಜಿಲ್ಯೆಯಲ್ಲಿ ನಿನ್ನೆ ಮದ್ಯಾಹ್ನ ದಿಂದ ಗಾಳಿ ಮಳೆ ಹೆಚ್ಚಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಬರ್ತೀಯಾಗಿ, ಉದ್ಯಾನವನವೆಲ್ಲ ಮುಳುಗಡೆಯಾಗಿದೆ. ನಾಪೋಕ್ಲುವಿಗೆ ಹೋಗುವ ಹಳೆ ರಸ್ತೆ ಕೂಡ ಸಂಪರ್ಕ ಕಡಿತಗೊಂಡಿದೆ. ರಾತ್ರಿಯಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಭಾಗಮಂಡಲ ನಿವಾಸಿಗಳು ಕಂಗಾಲಾಗಿದ್ದಾರೆ. ಬ್ರಹ್ಮಗಿರಿ ಬೆಟ್ಟ ತಪ್ಪಲಿನ ತಲಕಾವರಿಯಲ್ಲೂ ಭಾರಿ ಮಳೆ ಬೀಳುತ್ತಿದ್ದು ಭಕ್ತಾದಿಗಳ ಸಂಖ್ಯೆ ಸಂಪೂರ್ಣ ಇಳಿಮುಖಗೊಂಡಿದೆ.
ಮುರ್ನಾಡು ಸಮೀಪದ ಬಲಮುರಿಯಲ್ಲಿ ಕಾವೇರಿ ಹೊಳೆ ತುಂಬಿ ಹರಿಯುತ್ತಿದ್ದು ಹಳೆ ಸೇತುವೆ ಸಂಪೂರ್ಣ ಮುಳುಗಡೆ ಗೊಂಡಿದೆ. ನದಿಯ ಎರಡು ಭಾಗದಲ್ಲೂ ಕೂಡ ನೀರಿನ ಪ್ರಮಾಣ ಹೆಚ್ಚುತ್ತಿದ್ದು ಇದೇ ರೀತಿಯ ಮಳೆ 24 ತಾಸು ಸುರಿದರೆ ಮೇಲ್ಭಾಗದ ರಸ್ತೆವರೆಗೆ ಹಾಗೂ ನದಿ ತಟದಲ್ಲಿರುವ ಮನೆಗಳವರೆಗು ನೀರು ಬರುವ ಸಾಧ್ಯತೆ ಇದೆ. ಈ ಭಾಗದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಕುರಿತು ವರದಿಯಾಗಿದೆ.
ಒಟ್ಟಿನಲ್ಲಿ ಭಾಗಮಂಡಲ ಹೋಬಳಿಯಲ್ಲಿ ವರುಣನ ಆರ್ಭಟ ಜೋರಾಗಿದೆ. ನದಿ ತೊರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಬೆಳ್ಳಂಬೆಳಗ್ಗೆ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜಾ ಘೋಷಿಸಿದ್ದಾರೆ.
