Reality show: ರಿಯಾಲಿಟಿ ಶೋಗಳು ಎಂದರೆ ಎಲ್ಲರಿಗೂ ಬಲು ಪ್ರೀತಿ. ಅದರಲ್ಲೂ ಮಹಿಳೆಯರಿಗೆ ತುಸು ಹೆಚ್ಚು. ಆದರೆ ರಿಯಾಲಿಟಿ ಶೋಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಹಾಗೂ ಅಲ್ಲಿ ಏನೆಲ್ಲ ನಡೆಯುತ್ತೆ ಎಂಬ ವಿಚಾರಗಳು ಅಷ್ಟಾಗಿ ಪ್ರೇಕ್ಷಕರಿಗೆ ಗೊತ್ತಾಗಲ್ಲ. ಇದೀಗ ಖ್ಯಾತ ರಿಯಾಲಿಟಿ ಶೋ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಈ ರಿಯಾಲಿಟಿ ಶೋ ಸ್ಪರ್ಧಿಯೇ ಈ ವಿಚಾರಗಳನ್ನು ರಿವೀಲ್ ಮಾಡಿದ್ದು, ದೊಡ್ಡ ಸಂಚಲನವೇ ಸೃಷ್ಟಿಸಿದೆ.
ಹೌದು, ತೆಲುಗು ಜನಪ್ರಿಯ ರಿಯಾಲಿಟಿ ಶೋ ಪಾಡುತಾ ತೀಯಗಾ ಹಾಗೂ ಅದರ ತೀರ್ಪುಗಾರರಾದ ಖ್ಯಾತ ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ, ಹಿನ್ನೆಲೆ ಗಾಯಕಿ ಸುನೀತಾ ಮತ್ತು ಗೀತರಚನೆಕಾರ ಚಂದ್ರಬೋಸ್ ವಿರುದ್ಧ ಇದೇ ಶೋನ ಸ್ಪರ್ಧಿಯಾಗಿರುವ ಗಾಯಕಿ ಪ್ರವಸ್ತಿ ಆರಾಧ್ಯ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಈ ಕುರಿತಾಗಿ ವಿಡಿಯೋ ಮಾಡಿ ಹರಿ ಬಿಟ್ಟಿರುವ ಅವರು ಈ ಪ್ರೊಡಕ್ಷನ್ ಅತ್ಯಂತ ಕೆಟ್ಟದಾಗಿದೆ. ಅವರು ನಮಗೆ ಡ್ರೆಸ್‌ಗಳನ್ನು ಕೊಟ್ಟು ಸೊಂಟದ ಕೆಳಗೆ ಸೀರೆಯನ್ನು ಉಡಬೇಕು ಎಂದು ಹೇಳುತ್ತಾರೆ. ಇನ್ನು ಕಾಸ್ಟ್ಯೂಮ್ ಡಿಸೈನರ್ “ನಿಮ್ಮ ದೇಹಕ್ಕೆ ಇನ್ನೇನು ಕೊಡಬಹುದು” ಎಂದು ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿದ್ದ. ಅವರ ಮಾತುಗಳಿಂದಾಗಿ ನಾನು ನನ್ನ ಆತ್ಮವಿಶ್ವಾಸ ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದೆ ಎಂದಿದ್ದಾರೆ.
ಅಲ್ಲದೆ ಕಾರ್ಯಕ್ರಮದ ಸೆಟ್‌ನಲ್ಲೂ ನನಗೆ ಭಾರಿ ಅವಮಾನವಾಗಿದೆ. ನಾನು ಜೀವನೋಪಾಯಕ್ಕಾಗಿ ಮದುವೆಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಹಾಡುತ್ತೇನೆ. ಇದೇ ವಿಚಾರವಾಗಿ ನನ್ನನ್ನು ಕೀಳಾಗಿ ಕಾಣುವಂತೆ ಮಾಡಿದ್ದಾರೆ. ತೀರ್ಪುಗಾರರು ನನ್ನ ವೃತ್ತಿಯನ್ನು ಅಪಹಾಸ್ಯ ಮಾಡಿದ್ದಾರೆ, ತನ್ನನ್ನು ಕೀಳಾಗಿ ಕಾಣುವಂತೆ ಮಾಡಿದ್ದಾರೆ ಎಂದು ಪ್ರವಸ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಸೆಟ್‌ನಲ್ಲಿ ತನ್ನನ್ನು ಬಾಡಿ ಶೇಮಿಂಗ್ ಮಾಡ್ತಾರೆ. ನನ್ನ ದೇಹದ ಆಕಾರದ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ರಿಯಾಲಿಟಿ ಶೋ ಪ್ರೊಡಕ್ಷನ್‌ನವರು ಸೊಂಟದವರೆಗೆ ಸೀರೆಯುಟ್ಟು, ಹೊಕ್ಕಳ ಕಾಣಿಸುವಂತೆ ಎಕ್ಸ್‌ಪೋಸ್ ಮಾಡುವಂತೆ ಒತ್ತಾಯಿಸುತ್ತಾರೆ ಎಂದೂ ಗಾಯಕಿ ಪ್ರವಾಸಿ ಗಂಭೀರ ಆರೋಪ ಮಾಡಿದ್ದಾರೆ.
