Mangaluru : ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅನೇಕ ಕಡೆ ಹಾನಿ ಉಂಟಾಗಿದೆ. ಅಂತೆಯೇ ಕರಾವಳಿ ಭಾಗದಲ್ಲೂ ಭಾರಿ ಮಳೆಯಾಗುತ್ತಿದ್ದು, ಪರಿಣಾಮ ಕೆಲವೆಡೆ ಸಾವು ನೋವುಗಳು ಉಂಟಾಗಿವೆ.
ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಕಾಂತಪ್ಪ ಪೂಜಾರಿ (Kanthappa Pujari) ಎನ್ನುವವರ ಮನೆ ಮೇಲೆ ಗುಡ್ಡ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂರು ಜನ ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಹಿಂದೂ, ಮುಸಲ್ಮಾನರು ಕೋಮು ಸೌಹಾರ್ದತೆಯನ್ನು ಮೆರೆದಿದ್ದಾರೆ.
ಹೌದು, ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಕಾಂತಪ್ಪ ಪೂಜಾರಿ (Kanthappa Pujari) ಎನ್ನುವವರ ಮನೆ ಮೇಲೆ ಗುಡ್ಡ ಕುಸಿದ ಸಂದರ್ಭದಲ್ಲಿ ಅವಶೇಷಗಳ ಅಡಿ ಸಿಲುಕಿದ್ದ ಪೂಜಾರಿ ಕುಟುಂಬದ ಸದಸ್ಯರನ್ನು ರಕ್ಷಿಸಲು ಜನ ಧರ್ಮಭೇದ, ಜಾತಿಭೇದ ಮರೆತು ಮುಂದಾಗಿದ್ದಾರೆ. ಮುಸಲ್ಮಾನರು ತಮ್ಮ ನಮಾಜ್ ಕಾರ್ಯವನ್ನು ಬಿಟ್ಟು ಹಿಂದೂ ಕುಟುಂಬದ ರಕ್ಷಣೆಗೆ ಮುಂದಾಗಿದ್ದಾರೆ. ಈ ಮೂಲಕ ನಾವೆಲ್ಲರೂ ಒಂದೇ ಎಂದು ಉಳ್ಳಾಲದ ಜನ ಸಾರಿದ್ದಾರೆ.
ಅಂದಹಾಗೆ ಮಂಗಳೂರಿನ ವರದಿಗಾರರು ಒಬ್ಬರು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಲು ಮುಂದಾದಾಗ ಮುಸ್ಲಿಂ ಸಮುದಾಯದ ಜನ ಮಾತಾಡುವುದನ್ನು ಕೇಳಿಸಿಕೊಂಡಾಗ ನಿಜಕ್ಕೂ ಮನ ಮಿಡಿಯುತ್ತದೆ. ಉಳ್ಳಾಲವೂ ದಕ್ಷಿಣ ಕನ್ನಡ ಜಿಲ್ಲೆಯ ಭಾಗವೇ ಎಂಬ ಸಂಶಯ ಕಾಡಲಾರಂಭಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿ-ಧರ್ಮಗಳ ಸಂಘರ್ಷವೇ ಇಲ್ಲ, ಯಾರೋ ಒಂದಿಬ್ಬರು ಕಿಡಿಗೇಡಿಗಳು ದುಷ್ಕೃತ್ಯಗಳನ್ನು ನಡೆಸಿ ಅದಕ್ಕೆ ಧರ್ಮದ ಲೇಪ ನೀಡುತ್ತಾರೆ, ಅವರು ಮಾಡುವ ಕೃತ್ಯ ಮತ್ತು ಮಾನವೀಯತೆ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಅಲ್ಲದೆ ಗುಡ್ಡಕುಸಿತದಿಂದ ಮೃತಪಟ್ಟ ಮಕ್ಕಳ ಬಗ್ಗೆ ಮಾತಾಡುವಾಗ ಅವರ ಕಣ್ಣಲ್ಲಿ ನೀರು ಬರುತ್ತದೆ.
ಹಿರಿಯ ಮುಸ್ಲಿಂ ಮುಖಂಡರು ಒಬ್ಬರು ಮಾತನಾಡಿ ಇಂದು ಶುಕ್ರವಾರ ನಮಗೆ ಪವಿತ್ರವಾದ ದಿನ ನಾವೆಲ್ಲರೂ ನಮಾಜ್ ಮಾಡಬೇಕಿತ್ತು, ಆದರೆ ನಮಗೆ ಅದೆಲ್ಲದಕ್ಕಿಂತಲೂ ಮುಖ್ಯವಾದದ್ದು ಅವರ ಜೀವ ರಕ್ಷಣೆ ಹಾಗಾಗಿ ನಾವೆಲ್ಲರೂ ನಮಾಜ್ ಬಿಟ್ಟು ನಮ್ಮ ಬಂಧುಗಳ ಜೀವ ರಕ್ಷಣೆಗೆ, ಅವರ ಕುಟುಂಬದವರ ರಕ್ಷಣೆಗೆ ಮುಂದಾಗಿದ್ದೇವೆ ಎಂದು ಹೇಳುತ್ತಾರೆ.
