Tihar Jail: ತಿಹಾರ್ ಜೈಲ್ನಿಂದ ಬೆಚ್ಚಿ ಬೀಳಿಸುವಂತ ಮಾಹಿತಿಯೊಂದು ಹೊರ ಬಂದಿದ್ದು, ಜೈಲಿನಲ್ಲಿ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 125 ಜನ ಕೈದಿಗಳಲ್ಲಿ ಹೆಚ್ಐವಿ ರೋಗ ಪತ್ತೆಯಾಗಿದೆ.
ಹೌದು, ತಿಹಾರ ಜೈಲಿನಲ್ಲಿರುವ (Tihar Jail) 125 ಕೈದಿಗಳಿಗೆ ಎಚ್‌ಐವಿ ಪಾಸಿಟಿವ್ (HIV Positive) ಬಂದಿದೆ. ಅಷ್ಟೇ ಅಲ್ಲ, 200 ಕೈದಿಗಳು ಸೆಕ್ಸ್ ಸಂಬಂಧಿ ಕಾಯಿಲೆಯಿಂದ (Syphilis) ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಒಟ್ಟು 14 ಸಾವಿರ ಕೈದಿಗಳಲ್ಲಿ 10, 500 ಕೈದಿಗಳ ಮೆಡಿಕಲ್ ಸ್ಕ್ರೀನಿಂಗ್ ಮಾಡಲಾಗಿತ್ತು. ಈ ವೇಳೆ ಇಂತಹದೊಂದು ಆತಂಕಕಾರಿ ವಿಷಯ ಹೊರಗೆ ಬಂದಿದೆ.
ಇತ್ತೀಚೆಗೆ ತಿಹಾರ ಜೈಲಿನ ಡಿಜಿ ಆಗಿ ಸತೀಶ್ ಗೋಲ್ಚಾ ಅವರು ಅಧಿಕಾರ ವಹಿಸಿಕೊಂಡಿದ್ದು, ಅವರು ಕೈದಿಗಳ ಆರೋಗ್ಯ ತಪಾಸಣೆಗೆ ಸೂಚಿಸಿದ್ದರು. ಅದರಂತೆ, ಕಳೆದ ಮೇ ಹಾಗೂ ಜೂನ್ ತಿಂಗಳಲ್ಲಿ 10,500 ಕೈದಿಗಳ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಇನ್ನೂ, 3,500 ಕೈದಿಗಳ ಆರೋಗ್ಯ ತಪಾಸಣೆ ಬಾಕಿ ಇದೆ ಎಂದು ತಿಳಿದುಬಂದಿದೆ. ಹಾಗಾಗಿ, ಇನ್ನೂ ಇಂತಹ ಕಾಯಿಲೆ ಪೀಡಿತರ ಸಂಖ್ಯೆ ಜಾಸ್ತಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಅಸುರಕ್ಷಿತ ಲೈಂಗಿಕ ಸಂಪರ್ಕ ಸೇರಿ ಹಲವು ಕಾರಣಗಳಿಂದಾಗಿ ಎಚ್‌ಐವಿ ತಗುಲುತ್ತದೆ. ಆದರೆ, ಜೈಲಿನಲ್ಲಿರುವ ನೂರಾರು ಕೈದಿಗಳಿಗೆ ಹೇಗೆ ಏಕಾಏಕಿ ಎಚ್‌ಐವಿ ತಗುಲಿತು ಎಂಬ ಪ್ರಶ್ನೆ ಕಾಡುತ್ತಿದೆ.
