KSRTC: ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಿನ್ನೆ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದರು. ಇದರ ಪರಿಣಾಮ ಬಸ್ ಸಂಚಾರ ಇಲ್ಲದೇ ಪ್ರಯಾಣಿಕರು ಪರದಾಟ ನಡೆಸುವಂತಾಗಿತ್ತು. ಆದರೆ ಕೋರ್ಟ್ ನಾ ಎಚ್ಚರಿಕೆಯ ಬೆನ್ನಲ್ಲೇ ಇಂದಿನಿಂದ ಮತ್ತೆ ಬಸ್ ಸಂಚಾರ ಆರಂಭವಾಗಿದೆ. ಆದರೆ ವಿಶೇಷ ಏನೆಂದರೆ ನಿನ್ನೆ ಸಾರಿಗೆ ನೌಕರರ ಮುಷ್ಕರದಿಂದಾಗಿ ಸರ್ಕಾರಕ್ಕೆ 15 ಕೋಟಿ ಉಳಿತಾಯವಾಗಿದೆ!!
ಹೌದು, ಸರಕಾರದ ಮೊದಲ ಗ್ಯಾರಂಟಿ “ಶಕ್ತಿ’ ಯೋಜನೆ ಅಡಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಆದರೆ ಮಂಗಳವಾರ ಕರೆ ಕೊಟ್ಟ ಮುಷ್ಕರದ ಹಿನ್ನೆಲೆಯಲ್ಲಿ ಬಿಎಂಟಿಸಿ ಹೊರತುಪಡಿಸಿದರೆ ಉಳಿದ ಮೂರೂ ನಿಗಮಗಳಲ್ಲಿ ಶೇ. 70ಕ್ಕೂ ಹೆಚ್ಚು ಬಸ್‌ಗಳ ಕಾರ್ಯಾಚರಣೆಯೇ ನಡೆಸಿಲ್ಲ. ಅದರಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ತುಂಬಾ ವಿರಳವಾಗಿತ್ತು. ಹೀಗಾಗಿ ಸಾರಿಗೆ ನೌಕರರು ನೀಡಿದ ಮುಷ್ಕರದಿಂದ ಸರಕಾರಕ್ಕೆ ನೇರವಾಗಿಯೇ ಸುಮಾರು 15 ಕೋಟಿ ರೂ.ಗಳಿಗೂ ಅಧಿಕ ಹಣ ಉಳಿತಾಯವಾಗಿದೆ!
ಅಂದಹಾಗೆ ನಾಲ್ಕೂ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ನಿತ್ಯ ಸರಾಸರಿ 1.20 ಕೋಟಿ ಜನ ಪ್ರಯಾಣಿಸುತ್ತಾರೆ. ಈ ಪೈಕಿ ಸರಾಸರಿ 70ರಿಂದ 72 ಲಕ್ಷ ಮಹಿಳಾ ಪ್ರಯಾಣಿಕರಾಗಿದ್ದಾರೆ. ಇವರ ಪ್ರಯಾಣದ ಮೊತ್ತ ದಿನಕ್ಕೆ ಹೆಚ್ಚು-ಕಡಿಮೆ 22ರಿಂದ 23 ಕೋಟಿ ರೂ. ಆಗುತ್ತದೆ. ಶಕ್ತಿ ಯೋಜನೆ ಅಡಿ ಈ ಮೊತ್ತವನ್ನು ಸರಕಾರವೇ ಭರಿಸುತ್ತಿದೆ. ಆದರೆ ಮುಷ್ಕರದ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಶೇ. 40ರಷ್ಟೂ ಇರಲಿಲ್ಲ. ಹೀಗಾಗಿ ನಿನ್ನೆ ಸರ್ಕಾರದ ಬೊಕ್ಕಸ ಖಾಲಿಯಾಗದೆ ಉಳಿದಿದೆ.
