ಮಡಂತ್ಯಾರು: ಇಲ್ಲಿಯ ಮಾಲಾಡಿ ಗ್ರಾಮದ ಅಂತರ, ನವುಂಡ ದೇವಸ್ಥಾನದ ಸಮೀಪ ಎರಡು ಚಿರತೆಗಳು ಕಾಣಿಸಿಕೊಂಡಿದೆ. ಜ.20 ರಂದು ರಾತ್ರಿ ಎರಡು ಚಿರತೆಗಳು ರಸ್ತೆ ಬದಿಗೆ ಬಂದು, ನಾಯಿಯೊಂದರ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಅಲ್ಲದೇ, ಸ್ಥಳೀಯರೋರ್ವರು ಬೈಕ್‌ನಲ್ಲಿ ರಾತ್ರಿ ಹೋಗುತ್ತಿರುವಾಗ ರಸ್ತೆ ಬದಿ ಎರಡು ಚಿರತೆಗಳು ಇರುವುದು ಕಂಡು ಬಂದಿದೆ.
ಸ್ಥಳೀಯರು ಹೇಳುವ ಪ್ರಕಾರ, ದೊಡ್ಡ ಚಿರತೆ ಮತ್ತೊಂದು ಮರಿ ಚಿರತೆ ಎಂದು ತಿಳಿಸಿದ್ದಾರೆ. ಚಿರತೆಗಳು ನಾಯಿಯೊಂದರ ಮೇಲೆ ದಾಳಿ ನಡೆಸಿದ್ದು, ನಾಯಿ ರಸ್ತೆಯಲ್ಲೇ ಸತ್ತು ಬಿದ್ದಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಇಲಾಖಾಧಿಕಾರಿಗಳು ರಾತ್ರಿಯೇ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಸೆರೆ ಹಿಡಿಯಲು ಬೋನ್ ಇಡುವುದಾಗಿ ಭರವಸೆ ನೀಡಿದ್ದಾರೆ.
ಮಾಲಾಡಿ ಪರಿಸರದಲ್ಲಿ ಚಿರತೆ ಇರುವ ಸುದ್ದಿ ತಿಳಿದು ನಾಗರಕರಿಗೆ ಭಯ ಭೀತರಾಗಿದ್ದಾರೆ. ಮಾಲಾಡಿ ಗ್ರಾಮದ ನವುಂಡ, ಅಂತರ ಪರಿಸರದ ನಾಗರಿಕರು, ಶಾಲಾ, ಕಾಲೇಜುಗಳಿಗೆ ಹೋಗುವ ಮಕ್ಕಳು ಜಾಗೃತಿ ವಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.













