Bangalore: ತಾನು ಬಾಡಿಗೆ ಕರೆದುಕೊಂಡು ಹೋಗುವ ಗ್ರಾಹಕರ ಮನೆಗೇ ಕನ್ನ ಹಾಕುತ್ತಿದ್ದ ಚಾಲಾಕಿ ಉಬರ್ ಆಟೋ ಚಾಲಕನನ್ನು ಚಂದ್ರಾಲೇಔಟ್ ಪೊಲೀಸರು ಬಂಧನ ಮಾಡಿದ್ದಾರೆ. ಸತೀಶ್ ಬಂಧಿತ ವ್ಯಕ್ತಿ. ಈತನಿಂದ ಪೊಲೀಸರು 237 ಗ್ರಾಂ ಚಿನ್ನಾಭರಣ, 47 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿ ಸತೀಶ್ ಮೂಲತಃ ತಮಿಳುನಾಡಿನ ವೆಲ್ಲೂರಿನವನು. ಈತ ಕಾವೇರಿಪುರದಲ್ಲಿ ತನ್ನ ತಾಯಿ, ಅಣ್ಣನ ಜೊತೆ ವಾಸವಿದ್ದ. ಉಬರ್, ಓಲಾ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಸುಲಭ ಹಣ ಸಂಪಾದನೆ ಮಾಡಲು ಕಳ್ಳದಾರಿ ಹಿಡಿದಿದ್ದಾನೆ.
ಮುಂಜಾನೆ ಆಟೋ ಬುಕ್ ಮಾಡುವ ಗ್ರಾಹಕರನ್ನು ಅವರು ಹೇಳೋ ಸ್ಥಳಕ್ಕೆ ಬಿಟ್ಟ ನಂತರ, ಮರುದಿನ ಗ್ರಾಹಕರ ಮನೆಗೆ ಕನ್ನ ಹಾಕಿ ಸಿಕ್ಕಿದ್ದನ್ನು ಸತೀಶ್ ದೋಚುತ್ತಿದ್ದ. ಹೀಗೆ ಓರ್ವ ಗ್ರಾಹಕರಾದ ಪ್ರೀತಿ ಅವರು ಉಬರ್ ಆಪ್‌ನಲ್ಲಿ ಆಟೋ ಬುಕ್ ಮಾಡಿದ್ದು, ಅದಕ್ಕೆ ಸತೀಶ್ ಒಕೆ ಮಾಡಿದ್ದಾರೆ. ಕೊನೆ ಕ್ಷಣದಲ್ಲಿ ಪ್ರೀತಿ ಅವರು ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ತಾನು ಕಾರಿನಲ್ಲಿ ಸಾಗರಕ್ಕೆ ಹೋಗಬೇಕಿದೆ. ನಿಮ್ಮ ಪರಿಚಯಸ್ಥರು ಯಾರಾದರೂ ಇದ್ದರೆ ತಿಳಿಸುವಂತೆ ಕೋರಿದ್ದರು. ಸತೀಶ್ ಪ್ರೀತಿ ಅವರನ್ನು ತನ್ನ ಸ್ನೇಹಿತನ ಕಾರಿನಲ್ಲಿ ಕಳುಹಿಸಿದ್ದ.
ಪ್ರೀತಿ ಅವರನ್ನು ಮೊದಲು ಪಿಕಪ್ ಮಾಡಲೆಂದು ಅವರ ಮನೆಗೆ ಹೋದಾಗ, ಆಕೆಯ ಮನೆಯನ್ನು ನೋಡಿದ್ದ. ಮರುದಿನ ಬಂದು ಬೀಗ ಮುರಿದು ಚಿನ್ನಾಭರಣ ದೋಚಿ ತಮಿಳುನಾಡಿಗೆ ಸತೀಶ್ ಪರಾರಿಯಾಗಿದ್ದ. ಜ.3 ರಂದು ವಾಪಾಸು ಬಂದ ಪ್ರೀತಿಗೆ ತನ್ನ ಮನೆಯಲ್ಲಿ ಕಳ್ಳತನವಾಗಿರುವ ಘಟನೆ ಗೊತ್ತಾಗಿದೆ. ಕೂಡಲೇ ಅವರು ಚಂದ್ರಾಲೇಔಟ್ ಠಾಣೆಗೆ ದೂರನ್ನು ನೀಡಿದ್ದಾರೆ.
ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ಮಾಹಿತಿಯನ್ನು ಆಧರಿಸಿ ಆರೋಪಿಯನ್ನು ಬಂಧನ ಮಾಡಿದ್ದಾರೆ.
