Ujjwala Scheme: ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. 75 ಲಕ್ಷ ಕುಟುಂಬಗಳಿಗೆ ಫ್ರೀ LPG ಕನೆಕ್ಷನ್ ಘೋಷಣೆಯಾಗಿದೆ. ಹೌದು, ಬುಧವಾರ ನಡೆದ ಸಚಿವ ಸಂಪುಟ (Union Cabinet) ಸಭೆಯಲ್ಲಿ, ದೇಶದ 75 ಲಕ್ಷ ಮನೆಗಳಿಗೆ ಉಜ್ವಲ ಯೋಜನೆ ಅಡಿಯಲ್ಲಿ (Ujjwala Scheme) ಉಚಿತವಾಗಿ ಅಡುಗೆ ಅನಿಲ ಸಂಪರ್ಕಕ್ಕಾಗಿ 1,650 ಕೋಟಿ ರೂ. ಮೀಸಲಿಡಲು ನರೇಂದ್ರ ಮೋದಿ ನೇತೃತ್ವದಲ್ಲಿ ಅನುಮೋದನೆ ನೀಡಲಾಗಿದೆ.
2016ರಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ ಬಡವರ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಗೊಳಿಸಿದೆ. ಈ ಯೋಜನೆ ಅಡಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗೆ (LPG cylinder) ಸಬ್ಸಿಡಿಯನ್ನೂ ನೀಡಲಾಗುತ್ತಿದೆ. ಈಗ ಉಜ್ವಲ ಯೋಜನೆ ಅನ್ವಯ ದೇಶದ 75 ಲಕ್ಷ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು ಹೆಚ್ಚಿನ ಹಣ ವಿನಿಯೋಗಿಸಲು ತೀರ್ಮಾನಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಇಷ್ಟು ಮನೆಗಳಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸುವುದು ಕೇಂದ್ರದ ಗುರಿಯಾಗಿದೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಯ ಇ-ಕೋರ್ಟ್ಸ್ ಯೋಜನೆಗೆ (3ನೇ ಹಂತ) 7,210 ಕೋಟಿ ರೂ. ವಿನಿಯೋಗಿಸಲು ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಕೇಂದ್ರ ಸರ್ಕಾರವು ಸಿಲಿಂಡರ್ ಬೆಲೆ ಇಳಿಕೆ ಮೂಲಕ ಜನರ ಅಸಮಾಧಾನ ತಣಿಸಲು ನಿರ್ಧಾರ ತೆಗೆದುಕೊಂಡಿದ್ದು, ಇದೀಗ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲು ಹಣ ಮೀಸಲಿಟ್ಟಿದೆ.
