2
Landslide in Mangalore: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದ್ದು, ಭಾರೀ ಮಳೆಗೆ ಗುಡ್ಡಗಳೇ ನೆಲಕಚ್ಚುತ್ತಿರುವ ಘಟನೆ ನಡೆದಿದ್ದು, ಮಂಜನಾಡಿಯ ಮೋಂಟೆಪದವು ಗುಡ್ಡಕುಸಿತದಿಂದ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ಮೂವರು ಸಾವಿಗೀಡಾಗಿದ್ದಾರೆ.
ಈ ಘಟನೆಗೆ ಗುಡ್ಡದ ಮೇಲೆ ನಡೆಸಿರುವ ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಹಾಗಾಗಿ ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಗುಡ್ಡ ಕುಸಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಗಾಯಾಳು ಅಶ್ವಿನಿ ಸಹೋದರ ತೇಜು ಕುಮಾರ್ ಆರೋಪ ಮಾಡಿದ್ದಾರೆ. ಮಂಜನಾಡಿ ಗ್ರಾಮ ಪಂಚಾಯಿತಿ ಪಿಡಿಓ ಚೈತ್ರಾ, ಕೆಆರ್‌ಡಿಐಎಲ್ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಇಂಜಿನಿಯರ್‌ಗಳು ಕಾರಣ ಎಂದು ಆರೋಪ ಮಾಡಿದ್ದು, ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105,106 ಪ್ರಕಾರ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.
