Home » Uppinangady: ಬೋಳಂತಿಲ; ಸರಣಿ ಕಳವು!

Uppinangady: ಬೋಳಂತಿಲ; ಸರಣಿ ಕಳವು!

0 comments

Uppinangady: ಇಲ್ಲಿಗೆ ಸಮೀಪದ 34ನೇ ನೆಕ್ಕಿಲಾಡಿ ಗ್ರಾಮದ ಬೋಳಂತಿಲದಲ್ಲಿ ಗುರುವಾರ ಬೆಳಗ್ಗಿನ ಜಾವ ಸರಣಿ ಕಳ್ಳತನ ನಡೆದಿದ್ದು, ನಾಲ್ಕು ಮನೆಗಳಿಂದ ಸುಮಾರು 4.80 ಲಕ್ಷ ರೂ. ಹಾಗೂ ಆಭರಣಗಳನ್ನು ಕದ್ದೊಯ್ದಿರುವ ಕುರಿತು ದೂರು ದಾಖಲಾಗಿದೆ.

ಅಜರುದ್ದೀನ್‌ ಅವರ ಮನೆ ಮಂದಿ ಕಾರ್ಯಕ್ರಮದ ನಿಮಿತ್ತ ಸಂಬಂಧಿಕರ ಮನೆಗೆ ಹೋಗಿದ್ದು, ಈ ಸಂದರ್ಭದಲ್ಲಿ ಅವರ ಮನೆಯ ಮುಂಭಾಗದ ಬಾಗಿಲು ಮುರಿದಿದ್ದು, ಕಪಾಟಿನಲ್ಲಿದ್ದ 2.80 ಲಕ್ಷ ರೂ. ದೋಚಲಾಗಿದೆ. ಅಜರುದ್ದೀನ್‌ ಅವರ ಬಾಡಿಗೆ ಮನೆಯಲ್ಲಿ ವಾಸವಿದ್ದ ನವಾಜ್‌ ಮನೆಯಿಂದ ಎರಡು ಲಕ್ಷ ರೂ. ಹಾಗೂ ಅರ್ಧ ಪವನ್‌ ತೂಕದ ಚಿನ್ನಾಭರಣವನ್ನೂ ಕಳ್ಳರು ಕದ್ದೊಯ್ದಿದ್ದಾರೆ.

ಪುತ್ತೂರು ತಾಲೂಕು ಪಂಚಾಯತ್‌ ಸಿಬ್ಬಂದಿ ಮಹಮ್ಮದ್‌ ಸಿರಾಜ್‌ ಅವರ ಮನೆಗೂ ಕಳ್ಳರು ನುಗ್ಗಿದ್ದು, ಕಪಾಟಿನಲ್ಲಿದ್ದ ಬೆಳ್ಳಿ ಗೆಜ್ಜೆ ಮೂರು ಸಾವಿರ ರೂ. ದೋಚಿಸಿದ್ದಾರೆ.

ಗ್ರಾಮ ಪಂಚಾಯತ್‌ ಸದಸ್ಯೆ ರತ್ನಾವತಿಯವರ ಹಳೆಯ ಮನೆಗೂ ಕಳ್ಳರು ನುಗ್ಗಿದ್ದು, ಅಲ್ಲಿ ಯಾವುದೇ ವಸ್ತು ಕಳುವಾಗಿಲ್ಲ ಎನ್ನಲಾಗಿದೆ. ಮಹಮ್ಮದ್‌ ಸಿರಾಜ್‌ ಮನೆಯಲ್ಲಿ ನಗ ನಗದಿಗಾಗಿ ಜಾಲಾಡಿಸಲಾಗಿದೆ. ಮನೆಯ ಫ್ರಿಡ್ಜ್‌ನಲ್ಲಿಟ್ಟಿದ್ದ ತಿಂಡಿಗಳನ್ನು ಕಳ್ಳರು ತಿಂದು ಹೋಗಿದ್ದಾರೆ.

ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳವನ್ನು ಕರೆಸಲಾಗಿದೆ. ತನಿಖೆ ನಡೆಯುತ್ತಿದೆ.

You may also like