King Cobra:ಉತ್ತರ ಕನ್ನಡ ಜಿಲ್ಲೆಯ (Uttara Kannada Disrtrict) ಜಗಲ್‌ಪೇಟೆ ಬಳಿ ಕಾರಿನಲ್ಲಿ ಕಾಳಿಂಗ ಸರ್ಪ (King Cobra) ಇರುವ ಬಗ್ಗೆ ತಿಳಿಯದೇ ಕಿಲೋಮೀಟರುಗಟ್ಟಲೆ ಪ್ರಯಾಣಿಸಿ ದಿಢೀರ್ ಆಗಿ ಹಾವಿರುವುದು ತಿಳಿದಿರುವ ಅಚ್ಚರಿಯ ಘಟನೆ ವರದಿಯಾಗಿದೆ.
ಗೋವಾದ ಕ್ಯಾಸಲ್ ರಾಕ್-ದೂಧಸಾಗರ ಪ್ರದೇಶದ ಕಂಡೇವಾಡಿಯ ವ್ಯಕ್ತಿಯೊಬ್ಬರು ತಮ್ಮ ಸೋದರಸಂಬಂಧಿಗಳ ಜೊತೆಗೆ ಜಗಲ್‌ಪೇಟೆ ಸಮೀಪದ ಮೆಸ್ಟ್ ಬಿರೋಡಾ ಗ್ರಾಮದ ಸಂಬಂಧಿಕರ ಮನೆಗೆ ಬೆಳಿಗ್ಗೆ ಮನೆಯಿಂದ ಹೊರಟಿದ್ದರಂತೆ. ಕಂಡೇವಾಡಿಯಿಂದ ಸರಿ ಸುಮಾರು 80 ಕಿಮೀ ದೂರದಲ್ಲಿರುವ ಜಗಲ್‌ಪೇಟೆ ಬಳಿ ದತ್ತಾತ್ರೇಯ ದೇವರ ದರ್ಶನಕ್ಕೆ ಕಾರನ್ನು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕೂಡ ಅವರಿಗೆ ಕಾಳಿಂಗ ಸರ್ಪವೊಂದು ತಮ್ಮೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದೆ ಎಂಬ ವಿಚಾರಕ್ಕೆ ಗಮನಕ್ಕೆ ಬಂದಿಲ್ಲವಂತೆ.
ತಾವು ತಲುಪಬೇಕಾದ ಸ್ಥಳಕ್ಕೆ ತಲುಪಿ ಕಾರಿನಿಂದ ಇಳಿದು . ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತ ನಿಂತಿದ್ದಾಗ, ಕಾರಿನಡಿ ಏನೋ ಶಬ್ದ ಕೇಳಿಸಿದೆ. ಹೀಗಾಗಿ, ಏನೆಂದು ನೋಡಿದಾಗ ಹಿಂಬದಿಯ ಚಕ್ರಗಳ ನಡುವೆ ಹಾವು ಸುತ್ತಿಕೊಂಡಿರುವುದು ಗೋಚರಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಜಗಲ್‌ಪೇಟೆಯಲ್ಲಿ ಭಾನುವಾರ ಕಾರಿನಲ್ಲಿ ಕಾಳಿಂಗ ಸರ್ಪದ ಜತೆ 80 ಕಿಮೀ ಪ್ರಯಾಣಿಸಿದ ನಾಲ್ವರು ಸಹೋದರ ಸಂಬಂಧಿಗಳು ಆಘಾತಗೊಂಡಿದ್ದಾರೆ. ಪ್ರಯಾಣದ ಸಂದರ್ಭ ಕೂಡ ಕಾರಿನ ಬೂಟ್ ಸ್ಪೇಸ್ನಲ್ಲಿ ಕಾಳಿಂಗ ಸರ್ಪ ಇದ್ದ ವಿಚಾರ ಪ್ರಯಾಣಿಸುತ್ತಿದ್ದ ಮಂದಿಗೆ ಅರಿವಿಗೇ ಬಂದಿರಲಿಲ್ಲ. ತಕ್ಷಣವೇ ಇವರು ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೆಲವು ಗಂಟೆಯ ಬಳಿಕ, ಅರಣ್ಯ ಇಲಾಖೆಯ ಹಾವು ರಕ್ಷಕರು ಕಾಳಿಂಗ ಸರ್ಪವನ್ನು ಕಾರಿನಿಂದ ಹೊರತೆಗೆದು ಹಾವನ್ನು ಸಮೀಪದ ಕಾಡಿಗೆ ಬಿಡಲಾಗಿದೆ ಎಂದು ತಿಳಿದುಬಂದಿದೆ.
