

ಬೆಳ್ತಂಗಡಿ: ವಿದ್ಯಾರ್ಥಿಗಳು ಆತ್ಮಾಭಿಮಾನವನ್ನು ಬೆಳೆಸಿಕೊಂಡು ಸಂಸ್ಕಾರಯುತವಾದ ಜೀವನ ನಡೆಸುವುದರ ಮೂಲಕ ಯಶಸ್ಸನ್ನು ಪಡೆಯುವಂತವರಾಗಬೇಕು ಎಂದು ಖ್ಯಾತ ವಾಗಿ ದಾಮೋದರ ಶರ್ಮ ಹೇಳಿದರು. ಅವರು ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ, ಶಿಸ್ತು, ಸಾಧನೆ ವಿಷಯದ ಕುರಿತು ಸಂವಾದ ನಡೆಸುತ್ತಾ, ಜೀವನದಲ್ಲಿ ಸೋತಾಗ, ಅವಮಾನವಾದಾಗ ಕೈ ಹಿಡಿದು ನಡೆಸಿ ರಕ್ಷಿಸುವಂತಹ ಹೆತ್ತವರಿಗೆ ಗೌರವ ಕೊಟ್ಟರೆ ಪ್ರಪಂಚದಲ್ಲಿ ನಮಗೆ ಗೌರವ ಸಿಗುತ್ತದೆ. ಹರೆಯದ ಕ್ಷಣಿಕ ಆಕರ್ಷಣೆಗೆ ಬಲಿಯಾಗದೆ, ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದೆ, ಭಯ, ಆತಂಕಗಳಿಂದ ದೂರವಿದ್ದು ಸಮಾಜದಲ್ಲಿ ಗೌರವ ಪೂರ್ವಕವಾಗಿ ಬದುಕಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಬೆಳಿಯಪ್ಪ ಕೆ. ಕಾರ್ಯಕ್ರಮ ನಿರ್ವಹಿಸಿದರು.













