RCB: ಐಪಿಎಲ್ 2026 ತಯಾರಿಗಳು ಜೋರಾಗಿ ನಡೆಯುತ್ತಿವೆ. ಸದ್ಯದಲ್ಲೇ ಹರಾಜು ಪ್ರಕ್ರಿಯೆ ಕೂಡ ನಡೆಯಲಿದೆ. ಆದರೆ ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಅಘಾತ ಒಂದು ಎದುರಾಗಲಿದೆಯೇ? ಎಂಬ ಗುಮಾನಿ ಮೂಡಿದೆ. ಕಾರಣ ವಿರಾಟ್ ಕೊಹ್ಲಿ ಅವರು ಆರ್ ಸಿ ಬಿ ತಂಡಕ್ಕೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ.
ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ನ ಮುಂದಿನ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ರೆವ್ ಸ್ಪೋರ್ಟ್ಜ್ ವರದಿಯ ಪ್ರಕಾರ ಆರ್ಸಿಬಿಯ ಮಾಜಿ ನಾಯಕ ವಾಣಿಜ್ಯ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿದ ನಂತರ ಈ ಊಹಾಪೋಹಗಳು ಪ್ರಾರಂಭವಾಗಿವೆ.
ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಣೆ ನೀಡಿರುವ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ, ‘ಆರ್‌ಸಿಬಿ ಫ್ರಾಂಚೈಸಿಯ ವಾಣಿಜ್ಯ ಒಪ್ಪಂದ ನವೀಕರಿಸದಿರಲು ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಇದರ ಅರ್ಥ ಅವರು ಆರ್‌ಸಿಬಿ ತಂಡವನ್ನು ತೊರೆಯುತ್ತಾರೆ ಎಂದಲ್ಲ. ವಿರಾಟ್ ಕೊಹ್ಲಿ ಮುಂದಿನ ಆವೃತ್ತಿಯಲ್ಲೂ ಆರ್‌ಸಿಬಿ ತಂಡದಲ್ಲಿ ಮುಂದುವರಿಯುವ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ.
ಅಲ್ಲದೆ “ಕೊಹ್ಲಿ ಈಗಷ್ಟೇ ಟ್ರೋಫಿ ಗೆದ್ದಿದ್ದಾರೆ. ಹಾಗಾದರೆ ಅವರು ಫ್ರ್ಯಾಂಚೈಸ್ ಅನ್ನು ಏಕೆ ತೊರೆಯುತ್ತಾರೆ? ಅವನು ಎಲ್ಲಿಯೂ ಹೋಗುತ್ತಿಲ್ಲ. ಯಾವ ಒಪ್ಪಂದವನ್ನು ನಿರಾಕರಿಸಬಹುದು ಎಂಬುದು ಊಹಾಪೋಹದ ಕ್ಷೇತ್ರದಲ್ಲಿದೆ. ಅವರು ಡ್ಯುಯಲ್ ಒಪ್ಪಂದವನ್ನು ಹೊಂದಿರಬಹುದು” ಎಂದು ಚೋಪ್ರಾ ಹೇಳಿದ್ದಾರೆ.
