ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರವು ವೀಸಾ ನಿಯಮ ಮತ್ತು ಪರಿಶೀಲನಾ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಎಚ್-1ಬಿ ವೀಸಾಗಾಗಿ ಅರ್ಜಿ ಸಲ್ಲಿಸಿದವರು ಹಾಗೂ ಅವರ ಅವಲಂಬಿತರಿಗೆ ನೀಡಲಾಗುವ ಎಚ್-4 ವೀಸಾಗಳಿಗಾಗಿ ಅರ್ಜಿ ಸಲ್ಲಿಕೆ ಸಲ್ಲಿಕೆ ಮಾಡಿದವರು ತಮ್ಮ ಜಾಲತಾಣ ಖಾತೆಗಳ ಗೌಪ್ಯತೆ ಸೆಟ್ಟಿಂಗ್ ಗಳನ್ನು ಸಾರ್ವಜನಿಕ (ಪಬ್ಲಿಕ್) ವೀಕ್ಷಣೆಗೆ ಲಭ್ಯವಿರುವಂತೆ ಬದಲಿಸಬೇಕು ಎಂದು ನಿರ್ದೇಶಿಸಿದೆ.
ಬರುವ ಡಿ.15ರಿಂದ ಪರಿಶೀಲನೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅಮೆರಿಕಾದ ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಸುರಕ್ಷೆಗೆ ಅಪಾಯವನ್ನುoಟು ಮಾಡುವ ಮತ್ತು ಪ್ರವೇಶಕ್ಕೆ ಅನರ್ಹ ಅರ್ಜಿದಾರರನ್ನು ಗುರುತಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೊಸ ಆದೇಶದಲ್ಲಿ ಅಮೆರಿಕದ ಗೃಹ ಇಲಾಖೆ ತಿಳಿಸಿದೆ.
ಈ ಹಿಂದೆ ಸಾಮಾಜಿಕ ಜಾಲತಾಣ ಪರಿಶೀಲನೆಯನ್ನು ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕರ ವೀಸಾ ಪ್ರಕ್ರಿಯೆ ವೇಳೆ ಅನುಸರಿಸಲಾಗಿತ್ತು. ಈಗ ಹೆಚ್ 1 ಬಿ, ಹೆಚ್ 4, ಎಫ್ ಎಂ ಹಾಗೂ ಜೆ ವಲಸೆ ರಹಿತ ವೀಸಾಗಳಿಗೆ ಅರ್ಜಿ ಸಲ್ಲಿಸಿದವರ ಪರಿಶೀಲನೆ ನಡೆಯಲಿದೆ.
