Water dispute: ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಮೂರು ತಿಂಗಳುಗಳಿಂದ ಭರ್ಜರಿ ಮಳೆಯಾಗುತ್ತಿರುವುದರಿಂದ ತಮಿಳುನಾಡಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ನೀರು ಹರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕವು ನೆರೆಯ ರಾಜ್ಯಕ್ಕೆ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ನೀರನ್ನು ಬಿಡುಗಡೆ ಮಾಡುತ್ತಿದೆ. ಹೆಚ್ಚುವರಿ ನೀರು ಸಂಗ್ರಹಿಸಲು ಕಾವೇರಿ ನದಿಗೆ ಅಡ್ಡಲಾಗಿ ಮೇಕೆ ದಾಟುವಿನಲ್ಲಿ ಸಮತೋಲನ ಜಲಾಶಯ ನಿರ್ಮಾಣ ಮಾಡುವ ಅಗತ್ಯ ಇದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸಾಮಾನ್ಯ ಮಳೆಯ ಸಮಯದಲ್ಲಿ ನಾವು ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡುಗಡೆ ಮಾಡಬೇಕಾಗಿದೆ. ಆದರೆ ನಾವು ನಿಗದಿಗಿಂತ ಹೆಚ್ಚಿನ ನೀರನ್ನು ಈಗಾ ಗಲೇ ಬಿಡುಗಡೆ ಮಾಡಿದ್ದೇವೆ. ಅದಕ್ಕಾಗಿಯೇ ನಾವು ಮೇಕೆದಾಟುನಲ್ಲಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಒತ್ತಾಯಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಮುಂಗಾರು ಅಧಿ ವೇಶನದ ಕೊನೆಯ ದಿನ ತಿಳಿಸಿದರು.
ಮೇಕೆದಾಟು ಯೋಜನೆಯನ್ನು ತಮಿಳುನಾಡು ಏಕೆ ವಿರೋಧಿಸುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರು ಕೇವಲ 177.25 ಟಿಎಂಸಿ ನೀರಿಗೆ ಮಾತ್ರ ಅರ್ಹರು. ಸುಪ್ರೀಂಕೋರ್ಟ್ ಕೂಡ ಅದನ್ನೇ ಹೇಳಿದೆ. ನಾವು ಮೇಕೆದಾಟು ಜಲಾಶಯ ನಿರ್ಮಿಸಿದರೆ, 67 ಟಿಎಂಸಿ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಇದು ನಮಗೆ ಕುಡಿಯುವ ನೀರಿಗೆ ಸಹಾಯ ಮಾಡುತ್ತದೆ ಮತ್ತು ಬರಗಾಲದ ಸಮಯದಲ್ಲಿಯೂ ಸಹ ಅದನ್ನು ಬಿಡುಗಡೆ ಮಾಡಬಹುದು ಎಂದು ಮುಖ್ಯಮಂತ್ರಿಗಳು ಹೇಳಿದರು.
ಸಮತೋಲನ ಜಲಾಶಯವನ್ನು ನಿರ್ಮಿಸಿದರೆ ಯಾವುದೇ ಹಾನಿ ಇಲ್ಲ ಎಂದು ಹೇಳಿದ ಅವರು, ಅದನ್ನು ವಿರೋಧಿಸಬೇಡಿ ಎಂದು ತಮಿಳುನಾಡು ಮುಖ್ಯಮಂತ್ರಿಗೆ ವಿನಂತಿಸಿದರು. ಈ ವರ್ಷ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಗಳು ತುಂಬಿವೆ ಮತ್ತು ರಾಜ್ಯವು ಕಾವೇರಿ, ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ಜಲಾಶಯಗಳಿಂದ ಹೆಚ್ಚಿನ ನೀರನ್ನು ಬಿಡುಗಡೆ ಮಾಡುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
