Weather Alert: ರಾಜ್ಯದಲ್ಲಿ ಚಳಿ ಪ್ರಮಾಣ ಹೆಚ್ಚಾಗಿದ್ದು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಇಳಿಕೆಯಾಗಿದೆ. ಮುಂದಿನ ಎರಡು ದಿನ ಬೆಂಗಳೂರಿನಲ್ಲಿ ಮಂಜು ಬೀಳಲಿದೆ.
ಶುಕ್ರವಾರ ಉತ್ತರ ಒಳನಾಡಿನ ಬೀದರ್, ವಿಜಯಪುರದಲ್ಲಿಕನಿಷ್ಠ ತಾಪಮಾನ 7.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ರಾಯಚೂರು ಮತ್ತು ಧಾರವಾಡದಲ್ಲಿ ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಗದಗ, ಹಾವೇರಿಯಲ್ಲಿ ತಲಾ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ದಕ್ಷಿಣ ಒಳನಾಡಿನ ಹಾಸನದಲ್ಲಿ 8.5 ಡಿಗ್ರಿ ಸೆಲ್ಸಿಯಸ್, ದಾವಣಗೆರೆಯಲ್ಲಿ 10 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ 11 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ಶನಿವಾರ ಉತ್ತರ ಒಳನಾಡಿನ ಎಲ್ಲಾ ಜಿಲ್ಲೆ ಮತ್ತು ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಶೀತ ಅಲೆ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ವೇಳೆ ಕರಾವಳಿಯಲ್ಲಿ ಕನಿಷ್ಠ ತಾಪಮಾನದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲಎಂದು ಇಲಾಖೆ ಸ್ಪಷ್ಟಪಡಿಸಿದೆ.
