Sigandhur Bridge : ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಮತ್ತೊಂದು ಪ್ರವಾಸಿ ತಾಣದ ಮುಕಟವೊಂದು ಸೇರ್ಪಡೆಯಾಗಿದೆ. ಜಿಲ್ಲೆಯ ಜನರ ದಶಕಗಳ ಕನಸೊಂದು ಈಗ ವಾಸ್ತವ ರೂಪ ಪಡೆದು ಲೋಕಾರ್ಪಣೆಗೊಂಡಿದೆ. ಹಲವು ದಶಕಗಳಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜನ ಎದುರು ನೋಡುತ್ತಿದ್ದ ಸಿಗಂದೂರು ಸೇತುವೆ ಹಿಂದು ಉದ್ಘಾಟನೆಯಾಗಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೇತುವೆಯನ್ನು ಉದ್ಘಾಟಿಸಿದ್ದಾರೆ.
ಶಿವಮೊಗ್ಗದ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಮೇಲೆ ನಿರ್ಮಾಣವಾಗಿರುವ, ಸಿಗಂದೂರು ಸೇತುವೆ ಈಗ ಉದ್ಘಾಟನೆಯ ಹೊಸ್ತಿಲಲ್ಲಿದೆ. ಸುಮಾರು 473 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಮಹಾಸೇತುವೆ ಕೇವಲ ಕಾಂಕ್ರೀಟ್ ಮತ್ತು ಉಕ್ಕಿನ ಕಟ್ಟಡವಲ್ಲ, ಬದಲಿಗೆ ಈ ಭಾಗದ ಜನರ ಬದುಕಿಗೆ ಹೊಸ ಭರವಸೆಯ ಸೇತುವೆ. ಹಾಗಿದ್ದರೆ ಸಿಗಂದೂರು ಸೇತುವೆಯ ವೈಶಿಷ್ಟ್ಯತೆ ಏನು ಗೊತ್ತಾ?
ಸಿಗಂದೂರು ಸೇತುವೆ 2.44 ಕಿ.ಮೀ. ಉದ್ದವಿದೆ. ಇದರಲ್ಲಿ 740 ಮೀಟರ್ ಮಾತ್ರ ಕೇಬಲ್ ಸೇತುವೆ ಇದೆ. 30ರಿಂದ 55 ಮೀಟರ್ ಎತ್ತರದ 17 ಪಿಲ್ಲರ್‌ಗಳಿವೆ. ಇದು ದ್ವಿಪಥ ಹೊಂದಿದ್ದು, 2 ಕಡೆ 1.5 ಮೀಟರ್ ಅಗಲದ ಪುಟ್ಪಾತ್ ಕೂಡ ಇದೆ.
ಪ್ರತೀ ಪಿಲ್ಲರ್ ಫೌಂಡೇಶನ್ 177 ಮೀಟರ್ ಅಂತರ ಇದೆ. ಈ ಸೇತುವೆಗೆ 30 ಮೀಟರ್ ಅಂತರದಲ್ಲಿ 80 ಪಿಲ್ಲರ್ ಫೌಂಡೇಶನ್ ಹಾಕಬೇಕಿತ್ತು. ಆದರೆ ಇದನ್ನು 19 ಪಿಲ್ಲರ್ ಫೌಂಡೇಶನ್‌ನಲ್ಲೇ ಮುಗಿಸಲಾಗಿದೆ. 177, 105, 93 ಮೀಟರ್ ಅಂತರದಲ್ಲಿ ಪಿಲ್ಲರ್‌ಗಳಿವೆ. ಇದು 2019ರಲ್ಲಿ ಘೋಷಣೆ ಆಗಿದ್ದು ಆಗ ಇದು ನೂತನ ತಂತ್ರಜ್ಞಾನವಾಗಿತ್ತು. ಈಗ ಇದಕ್ಕಿಂತ ಸುಧಾರಿತ ತಂತ್ರಜ್ಞಾನಗಳು ಬಂದಿವೆ.
ಸೇತುವೆಯು 604 ಬಾಕ್ಸ್ ಗಿರ್ಡರ್ ವಿಭಾಗಗಳು, 1.8 ಮೀಟರ್ ವ್ಯಾಸದ 164 ಪೈಲ್‌ಗಳು, ನಾಲ್ಕು ಪೈಲನ್‌ಗಳಲ್ಲಿ 96 ಕೇಬಲ್‌ಗಳು ಮತ್ತು ಗೋಳಾಕಾರದ ಬೇರಿಂಗ್‌ಗಳನ್ನು ಹೊಂದಿದೆ. ಹೊಸ ಸೇತುವೆಯು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಸ್ಥಳೀಯ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಇಷ್ಟು ದಿನಗಳ ಕಾಲ ಲಾಂಚ್ ಒಂದನ್ನೇ ಅವಲಂಬಿಸಿ, ದಿನನಿತ್ಯದ ಓಡಾಟಕ್ಕೆ, ತುರ್ತು ಸಂದರ್ಭಗಳಲ್ಲಿ ಪರದಾಡುತ್ತಿದ್ದ ಹಿನ್ನೀರಿನ ಜನರಿಗೆ ಈ ಸೇತುವೆ ಹೊಸ ಜೀವನಾಡಿಯಾಗಲಿದೆ. ಕರ್ನಾಟಕದ ಅತಿ ಉದ್ದದ ಒಳನಾಡು ಕೇಬಲ್-ಸ್ಟೇಯ್ಡ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿಂಗಂಧೂರು ಬ್ರಿಡ್ಜ್ ಈ ಭಾಗದ ಜನರ ಬಾಳ ಬೆಳಕಾಗಿದೆ.
