RSS: ದೇಶಾದ್ಯಂತ ಆರ್ ಎಸ್ ಎಸ್ ಅನ್ನು ಬ್ಯಾನ್ ಮಾಡುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ನಡುವೆ ಆರ್ ಎಸ್ ಎಸ್ ಯಾಕೆ ಇನ್ನು ನೋಂದಣಿಯಾಗಿಲ್ಲ ಎಂಬ ವಿಚಾರ ಕೂಡ ಮುನ್ನಲೆಗೆ ಬಂದಿತ್ತು. ಈ ಬಗ್ಗೆ ಸರಿಯಾದ ಸ್ಪಷ್ಟಿಕರಣ ಕೂಡ ಸಿಕ್ಕಿರಲಿಲ್ಲ. ಆದರೆ ಇದೀಗ ಆರ್ ಎಸ್ ಎಸ್ ಸರಸಂಗ ಚಾಲಕ ಮೋಹನ್ ಭಾಗವತ್ ಅವರು ಈ ಕುರಿತು ಖಡಕ್ ಉತ್ತರವನ್ನು ನೀಡಿದ್ದಾರೆ.
ಆರ್ಎಸ್ಎಸ್ ಶತಮಾನೋತ್ಸವ ಹಿನ್ನೆಲೆ ಹೊಸಕೆರೆಹಳ್ಳಿಯ PES ಕಾಲೇಜು ಸಭಾಂಗಣದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ನಿನ್ನೆ ಉಪನ್ಯಾಸ ನೀಡಿದ್ದರು. ಇಂದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ರಾಜ್ಯದಿಂದ ಆಗಮಿಸಿರುವ ವಿವಿಧ ಕ್ಷೇತ್ರಗಳ ಆಹ್ವಾನಿತರ ಪ್ರಶ್ನೆಗೆ ಅವರು ಉತ್ತರ ನೀಡಿದ್ದು, ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಈ ಕುರಿತಾಗಿ ಮಾತನಾಡಿದ ಅವರು RSS ಸ್ಥಾಪನೆ ಆಗಿದ್ದು 1925ರಲ್ಲಿ. ಆಗ ಭಾರತದಲ್ಲಿದ್ದ ಬ್ರಿಟಿಷರ ಬಳಿ ನಾವು ಸಂಘವನ್ನು ನೋಂದಣಿ ಮಾಡಿಕೊಳ್ಳಬೇಕಿತ್ತಾ? ಸ್ವಾತಂತ್ರ್ಯ ಬಂದ ನಂತರವೂ ನೋಂದಣಿ ಕಡ್ಡಾಯ ಮಾಡಿಲ್ಲ. ನಮ್ಮದು ಸ್ವತಂತ್ರ ಹಾಗೂ ಕಾನೂನಾತ್ಮಕ ಸಂಘವಾಗಿದ್ದು, ಹೀಗಾಗಿಯೇ ನೋಂದಣಿ ಮಾಡಿಸಿಲ್ಲ. ಹಿಂದೂ ಧರ್ಮ ಕೂಡಾ ನೋಂದಣಿ ಆಗಿಲ್ಲ. RSS ನಿಷೇಧ ಮಾಡುವ ಬಗ್ಗೆಯೂ ಚರ್ಚೆ ನಡೆದಿದ್ದು, ಕೋರ್ಟ್ ಇದನ್ನು ತಿರಸ್ಕರಿಸಿದೆ. ನಮ್ಮದು ಸಂವಿಧಾನಾತ್ಮಕ ಸಂಘವಾಗಿದ್ದು, ಆರ್ಎಸ್ಎಸ್ ಆದಾಯ ತೆರಿಗೆ ಸಹ ಕಟ್ಟುತ್ತಿದೆ ಎಂದು ಹೇಳಿದ್ದಾರೆ.
