ಸಂಸಾರ ಅಂದ ಮೇಲೆ ಸಣ್ಣ ಸಣ್ಣ ತಪ್ಪುಗಳು, ಗಲಾಟೆಗಳು ಸಾಮಾನ್ಯ. ಕೆಲವೊಮ್ಮೆ ಒಬ್ಬರಿಗೊಬ್ಬರಿಗೆ ಸಮಯವನ್ನು ನೀಡಲು ಕಷ್ಟವಾಗುತ್ತದೆ. ಆದರೆ ಈಗ ಸಮಾಜದಲ್ಲಿ ಏನಾಗಿದೆ ಅಂದರೆ ಕ್ಷುಲ್ಲಕ ಕಾರಣಕ್ಕೂ ಸಾವೊಂದೇ ಪರಿಹಾರ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇಲ್ಲೊಬ್ಬ ಮಹಿಳೆಯು ತನ್ನ ಗಂಡ ಊಟ ಮಾಡಲು ತನ್ನೊಂದಿಗೆ ಬರಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬಾಲ್ಯದಿಂದಲೂ ಒಂದೇ ಶಾಲೆಯಲ್ಲಿ ಕಲಿತ ಸಹಪಾಠಿಗಳು. ಚಿಕ್ಕಂದಿನಿಂದ ಒಟ್ಟೋಟ್ಟಿಗೆ ಆಡಿ ಬೆಳೆದವರು. ವರ್ಷಗಟ್ಟಲೇ ಪ್ರೀತಿಸಿ, ಪೋಷಕರ ಒಪ್ಪಿಗೆ ಪಡೆದು ಕಳೆದೆರಡು ವರ್ಷಗಳ ಹಿಂದಷ್ಟೇ ತಮ್ಮ ಸುಮಧುರವಾದ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸ್ವಚ್ಛಂದವಾಗಿ ಹಾರಾಡುವ ಜೋಡಿ ಹಕ್ಕಿಯಂತಿದ್ದರು ಈ ದಂಪತಿಗಳು. ಇದೀಗ ಪತ್ನಿಯು ಸಣ್ಣ ಮನಸ್ತಾಪದಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅವಳ ಹೆಸರು ಸ್ವಾತಿ. ಈಕೆ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್.ಕೈತುಂಬ ಸಂಬಳ.ಬಾಲ್ಯದ ಗೆಳೆಯನೊಂದಿಗೆ ಚಿಗುರಿದ್ದ ಪ್ರೀತಿಯನ್ನು ಪೋಷಕರಿಗೆ ತಿಳಿಸಿ ಒಪ್ಪಿಸಿ ಕಳೆದ ಎರಡು ವರ್ಷಗಳ ಹಿಂದಯಷ್ಟೇ ಮದ್ವೆಯಾಗಿದ್ದಳು. ಮದುವೆ ಬಳಿಕವೂ ಪತ್ನಿ, ಮಾವ, ಭಾವ, ವರಗಿತ್ತಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಳು.
ಕಳೆದ ಎರಡು ದಿನದ ಹಿಂದೆ ಮನೆಯಲ್ಲಿ ಸ್ವಾತಿಗೆ ಇಷ್ಟವಿಲ್ಲದ ಅಡುಗೆ ಮಾಡಿದ್ದರಂತೆ. ಇಷ್ಟವಿಲ್ಲದ ಅಡುಗೆ ತಿನ್ನದ ಸ್ವಾತಿ ಹಾಗೇ ಮಲಗಿದ್ದಾಳೆ. ಮರುದಿನ ಬೆಳಗ್ಗೆ ಉದ್ಯೋಗಕ್ಕೆಂದು ತೆರಳಿ, ಪತಿಯೊಂದಿಗೆ ಕರೆಮಾಡಿ ಮಾತನಾಡಿದ್ದಾಳೆ. ನಿನ್ನೆ ಮಧ್ಯಾಹ್ನ ಪತಿ ಆಕೆಗೆ ಇಷ್ಟದ ಊಟವನ್ನು ಆಕೆಯ ಆಫೀಸ್ ಬಳಿಗೆ ಫುಡ್ ಡೆಲಿವರಿ ಆರ್ಡರ್ ಮಾಡಿದ್ದ. ಅಲ್ಲಿಗೆ ಬಂದು ತಾನು ಸ್ವಾತಿ ಜತೆಗೆ ಊಟಮಾಡುವುದಾಗಿ ಹೇಳಿದ್ದನಂತೆ. ಪತಿ ದಾಮೋದರ ಖಾಸಗಿ ಮೊಬೈಲ್ ಶೋ ರೂಂ ಮ್ಯಾನೇಜರ್ ಆಗಿದ್ದು, ಕೆಲಸದ ಒತ್ತಡದಲ್ಲಿ ಪತ್ನಿ ಕಚೇರಿ ತಲುಪುವುದು ತಡವಾಗಿದೆ.
ಅಷ್ಟೊತ್ತಿಗಾಗಲೇ ಫುಡ್ ಪಾರ್ಸಲ್ ರಿಸೀವ್ ಮಾಡಿದ್ದ ಸ್ವಾತಿ ಮಧ್ಯಾಹ್ನ ಊಟ ಮಾಡಿ ಮುಗಿಸಿ, ಹೇಳಿದ ಸಮಯಕ್ಕೆ ಪತಿ ಬರಲಿಲ್ಲವೆಂದು ಕೋಪಗೊಂಡಿದ್ದಾಳೆ.ಅದನ್ನೇ ನೆಪವಾಗಿಸಿಕೊಂಡು ಕಮಲನಗರ ಮನೆಗೆ ಬಂದು, ಮನೆಯಲ್ಲಿ ಯಾರು ಇಲ್ಲದ ವೇಳೆ ತನ್ನ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
